ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅಮಾಸೆಬೈಲು ಗ್ರಾಮದ ರಟ್ಟಾಡಿ, ಕೊಳಂಜೆ, ಜಡ್ಡಿನಗದ್ದೆ ಮೊದಲಾದೆಡೆಗಳಲ್ಲಿ ಬುಧವಾರ ಬೀಸಿದ ಸುಂಟರಗಾಳಿಗೆ ಮನೆ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದ್ದು ಲಕ್ಷಾಂತರ ಮೌಲ್ಯದ ಮರಗಿಡಗಳು ಧರಾಶಾಹಿಯಾಗಿದೆ. ಮನೆಗಳ ಹೆಂಚು ಹಾರಿಹೋಗಿರುವುದು, ಮನೆ ಕೊಟ್ಟಿಗೆ ಮೇಲೆ ಮರಬಿದ್ದಿರುವುದು, ಮೆಸ್ಕಾಂ ಕಂಬಗಳ ನೆಲಕ್ಕುರುಳಿರುವುದು ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ.
ಇಂದು ಬೆಳಿಗ್ಗೆ ಮಳೆಯೊಂದಿಗೆ ಬೀಸಿದ ಸುಂಟರಗಾಳಿ ಮನೆ, ಕೊಟ್ಟಿಗೆ, ತೋಟಗಳನ್ನು ಹೊಕ್ಕು ಅಪಾರ ಹಾನಿಯನ್ನುಂಟುಮಾಡಿದೆ. ಗ್ರಾಮಿಣ ಭಾಗವಾದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ ಹಾಗೂ ಕೊಳಂಜೆ ಎಂಬಲ್ಲಿ ಕೃಷಿ ತೋಟಕ್ಕೆ ಅಪಾರ ಹಾನಿ ಸಂಭವಿಸಿದೆ. ಕೊಳಂಜೆಯಲ್ಲಿ ಸುಮಾರು ಮೂರೂವರೆ ಎಕರೆ ಕೃಷಿ ಭೂಮಿ ಸುಂಟರಗಾಳಿಯ ತೀವ್ರತೆಗೆ ಧ್ವಂಸವಾಗಿದೆ. ಹಲವಾರು ಮನೆಗಳಿಗೂ ಹಾನಿಯಾಗಿವೆ. ಜಡ್ಡಿನಗದ್ದೆ, ರಟ್ಟಾಡಿ, ಹೊರ್ಲಿಜೆಡ್ಡು ಭಾಗದ ಸುಮಾರು 3000ದಷ್ಟು ಅಡಿಕೆ ಮರಗಳು ನೆಲಕ್ಕುರುಳಿವೆ.
ರಟ್ಟಾಡಿಯಲ್ಲಿ ಮರಗಳೂ ಸೇರಿದಂತೆ ತೋಟಗಳಿಗೆ ನುಗ್ಗಿದ ಸುಂಟರಗಾಳಿಯಿಂದಾಗಿ ಕೃಷಿ ನಾಶವಾಗಿದೆ. ಅಲ್ಲದೇ ಮನಗಳ ಮೇಲ್ಛಾವಣಿಗಳೂ ಧರೆಗುರುಳಿವೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶೋಭಲಕ್ಷ್ಮೀ, ಅರಣ್ಯಾಧಿಕಾರಿಗಳು, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು, ಸಂಭವಿಸಿದ ನಷ್ಟಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.