ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಂಗಳವಾರ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓಗಳೊಂದಿಗೆ ಹಾಗೂ ಕಂದಾಯ, ಸರ್ವೇ, ಅರಣ್ಯ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು.
ಸಭೆಯಲ್ಲಿ ಗೋಳಿಹೊಳೆ, ಹೇರೂರು, ಕೊಲ್ಲೂರಿನಲ್ಲಿ ಗೋಮಾಳದ ಜಾಗ ಗುರುತಾಗಿದ್ದು, ಆದಷ್ಟು ಬೇಗ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಆರಂಭಿಸುವಂತೆ ಹಾಗೂ ಉಳಿದಿರುವ ಗೋಮಾಳಗಳ ಸರ್ವೆ ಕಾರ್ಯವನ್ನು ಆದಷ್ಟು ಬೇಗ ಮುಗಿಸಿ, ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.
ಯಾವೆಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲ ಮತ್ತು ಸ್ಮಶಾನ ಜಾಗ ಗ್ರಾಮ ಪಂಚಾಯತ್ ಹೆಸರಲ್ಲಿ ಇಲ್ಲ ಎಂಬುದರ ಮಾಹಿತಿ ಪಡೆದುಕೊಂಡು, ಸ್ಮಶಾನ ಭೂಮಿಗಳನ್ನು ಇದುವರೆಗೂ ಗ್ರಾಮ ಪಂಚಾಯತ್ ಹೆಸರಿಗೆ ಪಹಣಿ ಮಾಡಿಸದೇ ಇದ್ದಲ್ಲಿ ಅಂತಹ ಗ್ರಾಮ ಪಂಚಾಯತ್ ಮಾಹಿತಿಯನ್ನು ಪಡೆದು ತಹಶೀಲ್ದಾರ್ ಅವರ ಗಮನಕ್ಕೆ ತಂದು ಪಹಣಿ ಮಾಡಿಸಬೇಕು ಮತ್ತು ಈ ಎಲ್ಲಾ ಮಾಹಿತಿಗಳನ್ನು ಕ್ರೋಢಿಕರಿಸಿ ಶಾಸಕರ ಕಚೇರಿಗೆ ಒದಗಿಸಬೇಕು ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಸ್ಮಶಾನವನ್ನು ಅಭಿವೃದ್ಧಿ ಪಡಿಸಲು ಅವಕಾಶಗಳಿವೆಯೇ ಎಂಬುದನ್ನು ಅಧಿಕಾರಿಗಳು ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು ಮತ್ತು ಈಗಾಗಲೇ ಇರುವ ಸ್ಮಶಾನಗಳಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ, ವ್ಯವಸ್ಥೆ ಇಲ್ಲದ ಕಡೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇತ್ತೀಚಿಗೆ ಕಂದಾಯ ಇಲಾಖೆಯಿಂದ ಲ್ಯಾಂಡ್ ಬೀಟ್ ತಂತ್ರಾಂಶದ ಮೂಲಕ ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಮಾಹಿತಿ ಲಭ್ಯವಿಲ್ಲದೇ ಇದ್ದಲ್ಲಿ ಪಂಚಾಯತ್ ಆಡಳಿತ ವಿಎಓಗಳಿಂದ ಪಡೆದು ಕೊಳ್ಳುವಂತೆ ಸೂಚಿಸಿದ ಅವರು, ಸಾಕಷ್ಟು ಸರ್ಕಾರಿ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿವೆ. ಹೂಳು ತುಂಬಿ ಕೊಂಡಿವೆ ಹಾಗೂ ಒತ್ತುವರಿ ಆಗಿವೆ. ಈ ಹಿಂದೆ ಕೃಷಿ ಉದ್ದೇಶಕ್ಕೆ ಕೆರೆ ಹಾಗೂ ಮದಗಗಳ ನೀರು ಉಪಯೋಗಿಸಲಾಗುತ್ತಿತ್ತು. ಆದರೆ ಪ್ರಸ್ತುತ ಕೆರೆ ಹಾಗೂ ಕೆರೆಯಂಚಿನ ಪ್ರದೇಶಗಳು ಕಲುಷಿತಗೊಂಡಿವೆ. ಹೀಗಾಗಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.
ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಕನಿಷ್ಠ 2 ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮವಾಗಬೇಕು. ಈ ಉದ್ದೇಶಕ್ಕಾಗಿ ಸ್ಥಳೀಯ ನರೇಗಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ನರೇಗಾ ಕೂಲಿ ಕಾರ್ಮಿಕರ ಲಭ್ಯತೆ ಇಲ್ಲದಿದ್ದರೆ ಸ್ಥಳೀಯ ಯುವಕ ಯುವತಿ ಸಂಘಟನೆಗಳ ಸಹಕಾರ ಅಥವಾ ಸಂಜೀವಿನಿ ಸಂಘದ ಸದ್ಯಸರ ಸಹಕಾರ ಕೋರುವಂತೆ ಸೂಚನೆ ನೀಡಿದರು.
ತಹಶೀಲ್ದಾರ್ ಪ್ರದೀಪ್ ಆರ್, ತಾಪಂ ಇಒ ಎನ್. ಭಾರತಿ, ತಾಲೂಕು ಪಶುವೈದ್ಯಾಧಿಕಾರಿ ನಾಗರಾಜ ಮರವಂತೆ, ಕೊಲ್ಲೂರು ದೇವಳದ ಇಒ ಪ್ರಶಾಂತ ಶೆಟ್ಟಿ ಹಾಗೂ ಇಲಾಖಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಇದ್ದರು.