ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು, ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆ, ಉಡುಪಿಯ ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಒಂದು ದಿನದ ಗಣಿತಶಾಸ್ತ್ರ ಶೈಕ್ಷಣಿಕ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು “ವಿದ್ಯಾ ದಾನವೆಂಬುದು ಶ್ರೇಷ್ಠದಾನ. ಪ್ರತಿ ಮಗುವಿನಲ್ಲಿ ಬೌದ್ಧಿಕ ಹಸಿವನ್ನು ಗುರುತಿಸಿ ಸಮರ್ಥ ಪರಿಹಾರ ಒದಗಿಸಿಕೊಡುವುದು ವೃತ್ತಿ ಧರ್ಮವಾಗಬೇಕು” ಎಂದು ಹೇಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದರು.
ಸ್ಥಾಪಕರಲ್ಲಿ ಒಬ್ಬರಾದ ಗಣಪತಿ ಭಟ್ ಕೆ. ಎಸ್., ಉಡುಪಿಯ ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ, ಉಡುಪಿ ಜಿಲ್ಲಾ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್, ಉಡುಪಿ ಜಿಲ್ಲಾ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿಗಳಾದ ಸುಧೀರ್ ಪ್ರಭು, ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸರಕಾರಿ ಪದವಿಪೂರ್ವ ಕಾಲೇಜು ಹೊನ್ನಾವರದ ಗಣಿತ ಉಪನ್ಯಾಸಕರಾದ ಸತೀಶ ನಾಯ್ಕ “ನೀಲನಕ್ಷೆ ಪ್ರಕಾರ ಪ್ರಶ್ನೆ ಪತ್ರಿಕೆ ತಯಾರಿಕಾ ವಿಧಾನ”ದ ಕುರಿತು ಉಪನ್ಯಾಸ ನೀಡಿದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶೈಕ್ಷಣಿಕ ಸಹಾಯಕ ನಿರ್ದೇಶಕರಾದ ಡಾಕ್ಟರ್ ರವಿಪ್ರಕಾಶ್ ವೈ. ಅವರು “ಇಂಟೆಗ್ರೇಶನ್ ಆಫ್ ಕ್ರಿಯೇಟಿವಿಟಿ ಇನ್ ಟು ಕ್ಲಾಸ್ ರೂಮ್ ಟೀಚಿಂಗ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು. ಉಡುಪಿ ಜಿಲ್ಲಾ ಗಣಿತ ಉಪನ್ಯಾಸಕ ಬಳಗದವರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಗಣಿತ ಉಪನ್ಯಾಸಕರು, ತ್ರಿಶಾ ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆಯವರು ಸ್ವಾಗತಿಸಿ, ಗಣಿತಶಾಸ್ತ್ರ ಉಪನ್ಯಾಸಕ ವೇದಿಕೆ ಉಡುಪಿ ಜಿಲ್ಲೆಯ ಕಾರ್ಯದರ್ಶಿಗಳಾದ ಸುಧೀರ್ ಪ್ರಭು ವಂದಿಸಿ, ಉಪನ್ಯಾಸಕಿ ಪ್ರಿಯಾಂಕಾ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು.