ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಮತ್ತು ಇನ್ನಿತರ ಕಲೆಯ ಮೂಲಕ ವಿದ್ಯಾರ್ಥಿಗಳನ್ನು ಒಬ್ಬ ಶ್ರೇಷ್ಠ ನಾಗರಿಕನಾಗಿ ರೂಪುಗೊಳ್ಳುವಂತೆ ಮಾಡಲು ಸಾಧ್ಯವಿದೆ. ಕಲೆಯ ಮೂಲಕ ಸಮಾಜಕ್ಕೆ ಯಕ್ಷ ಶಿಕ್ಷಣ ಟ್ರಸ್ಟ್ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಪ್ರದರ್ಶನ ಸಂಘಟನಾ ಸಮಿತಿ ಕುಂದಾಪುರ ಯಕ್ಷ ಶಿಕ್ಷಣ ಟ್ರಸ್ಟ್ ರಿ. ಉಡುಪಿ ಇವರು ಆಯೋಜಿಸಿರುವ ಕಿಶೋರ ಯಕ್ಷಗಾನ ಸಂಭ್ರಮ ಪ್ರದರ್ಶನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 22 ಪ್ರೌಢಶಾಲಾ ವಿಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಕರಾವಳಿಯ ಕಲೆಯಾದ ಯಕ್ಷಗಾನದಲ್ಲಿ ಕುಣಿತ, ಹಾಡುಗಾರಿಕೆ, ಸಂಭಾಷಣೆ ಮತ್ತು ತಾಳ ವಾದ್ಯಗಳ ತರಬೇತಿ ನೀಡಲಾಗುತ್ತಿದೆ. ಎಲ್ಲ ರೀತಿಯ ದೈಹಿಕ ಹಾಗೂ ಮಾನಸಿಕವಾಗಿ ಮನರಂಜನೆಯೊಂದಿಗೆ ಬೌದ್ಧಿಕ ವಿಕಸನವಾಗಿ ಮಕ್ಕಳ ನೈತಿಕ ಶಿಕ್ಷಣಕ್ಕೆ ಸಹಕಾರಿಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಕೆ., ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಕುಂದಾಪುರ ಆದರ್ಶ ಆಸ್ಪತ್ರೆಯ ಮಾಲಕರಾದ ಡಾ. ಆದರ್ಶ ಹೆಬ್ಬಾರ್, ಕಾವ್ರಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಸದಾನಂದ ಬಳ್ಕೂರು, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ, ಯಕ್ಷ ಯಕ್ಷಗಾನ ಟ್ರಸ್ಟ್ ಉಡುಪಿ ಕಾರ್ಯದರ್ಶಿ ಮುರಲಿ ಕಡೆಕಾರ್, ಸಂಘಟನಾ ಸಮಿತಿ ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ತದನಂತರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಲವಣಾಸುರ ಕಾಳಗ,, ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ವಿದ್ಯಾರ್ಥಿಗಳಿಂದ ಮೈಂದದ್ವಿವಿದ ಯಕ್ಷಗಾನದ ಕಾರ್ಯಕ್ರಮ ನೆರವೇರಿತು.