ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು, ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಉಡುಪಿ ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜುಲೈ 18ರ ತನಕವೂ ಭಾರಿ ಮಳೆಯ ಮುನ್ಸೂಚನೆ ಇದೆ.
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 92.7ಮಿ.ಮೀ ಮಳೆಯಾಗಿದ್ದು, ಈ ಪೈಕಿ ಕುಂದಾಪುರ ತಾಲೂಕಿನಲ್ಲಿ 101.8ಮಿ.ಮೀ, ಬೈಂದೂರು ತಾಲೂಕಿನಲ್ಲಿ 98.5 ಮಿ.ಮೀ., ಬ್ರಹ್ಮಾವರ ತಾಲೂಕಿನಲ್ಲಿ 100.4ಮೀ.ಮೀ, ಹೆಬ್ರಿ ತಾಲೂಕಿನಲ್ಲಿ 83.8 ಮಿ.ಮೀ. ಮಳೆಯಾಗಿದೆ.
ಹವಾಮಾನ ಇಲಾಖೆ ವರದಿಯಂತೆ ಜುಲೈ 14ರ ತನಕ ಭಾರಿ ಮಳೆ, ಜುಲೈ 15 ಮತ್ತು 16ರಂದು ಅತ್ಯಂತ ಭಾರಿ ಮಳೆ, ಜುಲೈ 17 ಮತ್ತು 18ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಕಳೆದ 15 ದಿನಗಳಲ್ಲಿ ವರಣನ ಆರ್ಭಟಕ್ಕೆ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು, ಪ್ರವಾಹ, ಕಡಲಕೊರೆತ, ಸುಂಟರಗಾಳಿ ಮೊದಲಾದವುಗಳನ್ನು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಕೃಷಿ, ತೋಟಗಾರಿಕಾ ಬೆಳೆ ಹಾನಿ, ವಿದ್ಯುತ್ ಕಂಬಗಳು, ಮನೆ, ಕೊಟ್ಟಿಗೆ ಹಾನಿ ಸೇರಿದಂತೆ ಜೀವಹಾನಿಯೂ ಆಗಿದೆ.
ನದಿ, ತೋಡು, ಕೆರೆ ಪಾತ್ರಗಳು ತುಂಬಿ ಹರಿಯುತ್ತಿದ್ದು ಕಾಲುಸಂಕ, ಶಿಥಿಲ ಸೇತುವೆಯನ್ನು ಅವಲಂಬಿಸಿರುವ ಜನರು ಜಾಗೃತೆ ವಹಿಸುವುದು ಅಗತ್ಯವಾಗಿದೆ. ಮರವಂತೆ ಸೇರಿದಂತೆ ಕಡಲ ತೀರ ಭಾಗದಲ್ಲಿ ತೆರೆಗಳ ಅಬ್ಬರ ಹೆಚ್ಚಿದ್ದು, ತೀರ ವಾಸಿಗಳು ಎಚ್ಚರದಿಂದಿರುವುದು ಅಗತ್ಯವಾಗಿದೆ. ಗುಡ್ಡದ ತಪ್ಪಲಿನ ಪ್ರದೇಶದ ಜನರೂ ಗುಡ್ಡ ಜರಿತದ ಬಗ್ಗೆ ಹಾಗೂ ಅಪಾಯಕಾರಿ ಪ್ರದೇಶದಲ್ಲಿ ಆಸರೆ ಪಡೆಯುವ ಸಂದರ್ಭ ಜನರು ಎಚ್ಚರ ವಹಿಸಬೇಕಿದೆ.