ಅಮಾಸೆಬೈಲು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊರ್ವನಿಗೆ ಗೂಡ್ಸ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರ ಗಾಯಗೊಂಡು ಉಡುಪಿ ಆಸ್ಪತ್ರೆಗ ದಾಖಲಾದ ಘಟನೆ ಇಲ್ಲಿನ ಮಚ್ಚಟ್ಟು ಎಂಬಲ್ಲಿ ನಡೆದಿದೆ. ಮಚ್ಚಟ್ಟು ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸ್ಥಳೀಯ ಅಣ್ಣಪ್ಪ ನಾಯಕ್ ಎಂಬುವರ ಪುತ್ರ ಕಾರ್ತಿಕ್(11) ಎಂಬಾತನೇ ಗಂಭೀರ ಗಾಯಗೊಂಡ ಬಾಲಕ.
ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಕಾರ್ತಿಕ್ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಇದೇ ಸಂದರ್ಭ ಬಂದ ಖಾಲಿ ಗೂಡ್ಸ್ ವ್ಯಾನು ವಿದ್ಯಾರ್ಥಿ ಕಾರ್ತಿಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಿದ್ಯಾರ್ಥಿಯ ತಲೆಗೆ ಹಾಗೂ ಕಾಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸುದ್ಧಿ ತಿಳಿದ ಶಾಲಾ ಮುಖ್ಯೋಪಾದ್ಯಾಯಿನಿ ಜ್ಯೋತಿ ಶೆಟ್ಟಿ ಬಾಲಕನನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರಾದರೂ ಯಾವುದೇ ವಾಹನಗಳಿಲ್ಲದ ಕಾರಣ ರಾಜ್ಯ ಸರ್ಕಾರೀ ನೌಕರರ ಸಂಘದ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸುದ್ಧಿ ಮುಟ್ಟಿಸಿದ್ದಾರೆ. ಅನಾರೋಗ್ಯದ ರಜೆಯಲ್ಲಿದ್ದ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ತಕ್ಷಣ ಸಮಸ್ಯೆಗೆ ಸ್ಪಂದಿಸಿ ತನ್ನ ಸವಂತ ಕಾರಿನಲ್ಲಿ ವಿದ್ಯಾರ್ಥಿಯನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರರಣ ದಾಖಲಾಗಿದೆ.