ಬೈಂದೂರು: ರಾಜ್ಯದಲ್ಲಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಅವರಿಂದಾಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಯಡ್ತರೆ ಗ್ರಾಪಂ ಆವರಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಯಡಿ ರೂ. 101.42ಲಕ್ಷ ಸಾಲ, ಸಹಾಯಧನ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದರು.
2015-16ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಾದ ಶ್ರಮಶಕ್ತಿ ಯೋಜನೆಯಡಿ ಒಟ್ಟು 144 ಫಲಾನುಭವಿಗಳಿಗೆ ರೂ. 33.70ಲಕ್ಷ ಕಿರುಸಾಲ ಯೋಜನೆಯಡಿ ಒಟ್ಟು 25 ಸ್ವಸಹಾಯ ಸಂಘಗಳ 299 ಫಲಾನುಭವಿಗಳಿಗೆ ರೂ. 29.90ಲಕ್ಷ, ಅರಿವು ವಿದ್ಯಾಭ್ಯಾಸ ಸಾಲಯೋಜನೆಯಡಿ ಒಟ್ಟು 28ಫಲಾನುಭವಿಗಳಿಗೆ ರೂ.24.40ಲಕ್ಷ, ಸ್ವಾವಲಂಬನಾ ಯೋಜನೆಯಡಿ ಒಟ್ಟು 26 ಫಲಾನುಭವಿಗಳಿಗೆ ರೂ.6.66ಲಕ್ಷ ಹಾಗೂ ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಡಿಯಲ್ಲಿ 13 ಫಲಾನುಭವಿಗಳಿಗೆ ರೂ. 6.76ಲಕ್ಷ ಸಾಲ ಸೌಲಭ್ಯಗಳ ಚೆಕ್‌ನ್ನು ಶಾಸಕರು ವಿತರಿಸಿದರು. ಬಳಿಕ ಯಡ್ತರೆ ಗ್ರಾಪಂ ವ್ಯಾಪ್ತಿಯ ಬಸವ ವಸತಿ, ಇಂದಿರಾ ಆವಾಸ್ ಯೋಜನೆಯಡಿ ಅರ್ಹ 36 ಫಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶಪತ್ರವನ್ನು ಶಾಸಕರು ಹಸ್ತಾಂತರಿಸಿದರು.
2014-15ನೇ ಸಾಲಿನಲ್ಲಿ ಬೈಂದೂರು ವಿಧಾನಸಭಾಕ್ಷೇತ್ರಕ್ಕೆ ಸಾಮಾನ್ಯ ಯೋಜನೆಯಡಿಯಲ್ಲಿ ಹಾಗೂ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಯೋಜನೆಗಳಡಿ ಒಟ್ಟು 473 ಭೌತಿಕ ಗುರಿಗೆ ಅನುಗುಣವಾಗಿ ರೂ. 116.20ಲಕ್ಷ ಆರ್ಥಿಕ ಗುರಿಯನ್ನಾಗಿರಿಸಿ ಮಾರ್ಚ್ 2014ರ ಅಂತ್ಯಕ್ಕೆ ಒಟ್ಟು 1062 ಫಲಾನುಭವಿಗಳಿಗೆ 299.02ಲಕ್ಷ ರೂ.ಗಳು ಅನುದಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಲಾವತಿ ನಾಗರಾಜ ಗಾಣಿಗ, ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಸ್. ರಾಜು ಪೂಜಾರಿ, ಕೆ. ರಮೇಶ ಗಾಣಿಗ, ಜಿಲ್ಲಾ ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಕಿರಣ್ ಕ್ರಾಸ್ತಾ, ಜಡ್ಕಲ್ ಗ್ರಾಮದ ಪಿ.ಎಲ್.ಜೋಸ್ ಉಪಸ್ಥಿತರಿದ್ದರು. ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕಿಶೋರ್ ಪುತ್ರನ್ ವಂದಿಸಿದರು.