ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೈಂದೂರು ತಾಲೂಕು ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಮತ್ತು ಗೋಳಿಹೊಳೆ ವಲಯದ ಭಜನೋತ್ಸವ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮೈಯಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ ಅವರು ನೆರವೇರಿಸಿ, ಪ್ರತಿಫಲ ಅಪೇಕ್ಷೆ ಇಲ್ಲದೆ ನಡೆಸುವ ಎಲ್ಲಾ ಸೇವೆಯಿಂದ ಭಗವಂತನ ಅನುಗ್ರಹಕ್ಕೆ ಪ್ರಾಪ್ತರಾಗುತ್ತೇವೆ. ಕಲಿಯುಗದಲ್ಲಿ ಭಜನೆಯಿಂದ ಮಾತ್ರ ದೇವರ ಒಲಿಸಿಕೊಳ್ಳಬಹುದು ಮತ್ತು ಹಿರಿಯ ಭಜನ ಕಲಾವಿದರು ಭಜನೆಯನ್ನು ಶ್ರೇಷ್ಠತೆಯ ಕಡೆಗೆಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಇನ್ನು ಮುಂದಕ್ಕೆ ಇಂದಿನ ಯುವ ಪೀಳಿಗೆ ಭಜನೆಯನ್ನು ಉಳಿಸಿ ಬೆಳೆಸಿ ಕೊಂಡು ಹೋಗುವ ಕಡೆಗೆ ಹಿರಿಯ ಭಜನಾ ಕಲಾವಿದರು ತಮ್ಮ ಸೇವೆಯನ್ನು ಮಡಿಪಾಗಿಡಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಹಿರಿಯರ ಜನಜಾಗೃತಿ ವೇದಿಕೆ ಇದರ ಸ್ಥಾಪಕಾಧ್ಯಕ್ಷರು ಬಿ. ಅಪ್ಪಣ್ಣ ಹೆಗ್ಡೆ ಅವರು ವಹಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಭಜನೆಗೆ ಇದೆ. ಹಿರಿಯ ನಾಗರಿಕರ ದಿನಾಚರಣೆಯಂದು ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಮಾಡಿರುವುದು ಶ್ಲಾಘನೀಯವಾದ ಕೆಲಸ ಆಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಅನ್ನಛತ್ರದ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಪ್ರಸಾದ್ ಅವರು ಭಜನೆ ಮತ್ತು ದೇವರ ನಾಮ ಸಂಕೀರ್ತನೆ ಮಾಡುವುದರಿಂದ ನಮ್ಮ ಸುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನವಾಗಿ ಪರಿಸರ, ವಾತಾವರಣ ಶುದ್ಧಗೊಳ್ಳುತ್ತದೆ. ನಮ್ಮಿಂದ ದೇವರಿಗೆ ನೀಡುವ ಸಂಪತ್ತು ಇದ್ದರೆ ಅದು ಭಜನೆ. ಇಂತಹ ಶ್ರೇಷ್ಠ ಕಾರ್ಯ ಇಂದು ಬೈಂದೂರಿನಲ್ಲಿ ನಡೆದಿದೆ.
ಬೈಂದೂರು ತಾಲೂಕಿನ 135 ಹಿರಿಯ ಭಜನ ಹಾಡುಗಾರರನ್ನು ಗುರುತಿಸಿ ಗೌರವಿಸಿರುವುದು ಹಿರಿಯ ನಾಗರಿಕರ ದಿನದಂದು ಹಿರಿಯರಿಗೆ ನೀಡುವ ಶ್ರೇಷ್ಠ ಗೌರವವಾಗಿದೆ. ಇದು ಬೈಂದೂರಿನ ಭಜನಾ ಪರಿಷತ್ ವತಿಯಿಂದ ನಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಭಜನಾ ಪರಿಷತ್ತಿನ ಸೇವೆಯನ್ನು ಶ್ಲಾಘಿಸಿ ಮತಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಯಡ್ತರೆ ಇದರ ಅಧ್ಯಕ್ಷರು ಟಿ. ನಾರಾಯಣ ಹೆಗಡೆ, ಹನುಮಂತ ನಿವೃತ್ತ ಮುಖ್ಯ ಶಿಕ್ಷಕರು ಮೈಯಾಡಿ, ಶೇಷಮ್ಮ ಶೆಡ್ತಿ, ರಾಜು ಎಸ್. ಮುಖ್ಯ ಶಿಕ್ಷಕರು ಎಸ್‌ಡಿಎಮ್ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ಮಂಗಳೂರು ಇದರ ಮೇಲ್ವಿಚಾರಕರು ಶಿವರಾಮ್ ಪೂಜಾರಿ, ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರು ಮಹೇಶ್ ಎಂ. ಡಿ, ಬೈಂದೂರು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷರು ರಘುರಾಮ ಕೆ. ಪೂಜಾರಿ, ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷರು ಶ್ರೀ ಕೃಷ್ಣ ಪೂಜಾರಿ, ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷರು ವಾಸು ಮೇಸ್ತ, ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರು ಸುಧಾಕರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶಿವರಾಜ್ ಪೂಜಾರಿ, ಶೇಖರ್ ಶೆಟ್ಟಿ ಗೋಳಿಹೊಳೆ ವಲಯದ ಜನಜಾಗೃತಿ ವೇದಿಕೆ ಸದಸ್ಯರು, ಬೈಂದೂರು ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷರು ಮಂಜು ಪೂಜಾರಿ ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.
ಅಪ್ಪಣ್ಣ ಹೆಗ್ಡೆ, ನಾರಾಯಣ ಹೆಗ್ಡೆ, ಶೇಖರ್ ಶೆಟ್ಟಿ ಅವರ ನಿರಂತರ ಸೇವೆಯನ್ನು ಗುರುತಿಸಿ ಬೈಂದೂರು ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.
ಮುಂಜಾನೆ 8 ಗಂಟೆಯಿಂದ 10 ಗಂಟೆವರೆಗೆ ಗೋಳಿಹೊಳೆ ವಲಯದ ಭಜನಾ ಮಂಡಳಿಗಳಿಂದ ಭಜನಾ ಸೇವೆ ಯಶಸ್ವಿಯಾಗಿ ನೆರವೇರಿತು. ನಂತರ ಭಜನಾ ಮಂಗಳೋತ್ಸವ ಪ್ರಾರಂಭವಾಗಿ ಭಜನಾ ದೀಪ ವಿಸರ್ಜನೆಯೊಂದಿಗೆ ಭಜನಾ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬೈಂದೂರು ತಾಲೂಕಿನ ಎಲ್ಲಾ ವಲಯಗಳ 135 ಮಂದಿ ಹಿರಿಯ ಭಜನ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಗೋಳಿಹೊಳೆ ವಲಯದ 18 ಹೊಸ ಭಜನಾ ಮಂಡಳಿಗಳಿಗಳನ್ನು ಭಜನಾ ಪರಿಷತ್ತಿಗೆ ಸೇರ್ಪಡೆಗೊಳಿಸಿ ತಾಳವನ್ನು ನೀಡಿ ಅಭಿನಂದಿಸಲಾಯಿತು
ಬೈಂದೂರು ತಾಲೂಕಿನ ಭಜನಾ ಪರಿಷತ್ ಸಂಯೋಜಕರುಗಳು, ಬೈಂದೂರು ತಾಲೂಕಿನ ಪ್ರಗತಿ ಭಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಶೌರ್ಯ ಶ್ರೀಪತ್ತು ನಿರ್ವಹಣಾ ಘಟಕದ ಸದಸ್ಯರು, ಭಜನಾ ಮಂಡಳಿಯ ಭಜಕ ವ್ರಂದದವರು, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೈಂದೂರು ತಾಲೂಕು ಯೋಜನಾಧಿಕಾರಿ ಕೆ. ವಿನಾಯಕ್ ಪೈ ಎಲ್ಲರನ್ನು ಸ್ವಾಗತಿಸಿದರು. ಪಡುಕೋಣೆ ವಲಯದ ಬಜನಾ ಪರಿಷತ್ ಸಂಯೋಜಕ ಮಂಜುನಾಥ್ ಧನ್ಯವಾದ ನೀಡಿದರು. ಗೋಳಿಹೊಳೆ ವಲಯದ ಮೇಲ್ವಿಚಾರಕಿ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.