ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿ ಅವರು ಬೆಂಗಳೂರಿನ ಬಸವನಗುಡಿಯ ಶ್ರೀ ದ್ವಾರಕಾನಾಥ ಭವನದಲ್ಲಿ ಕ್ರೋಧಿ ನಾಮ ಸಂವತ್ಸರದ ಚತುರ್ಮಾಸ ವೃತವನ್ನು ಶನಿವಾರ ಆರಂಭಿಸಿದರು.
ಅಂದು ಬೆಳಿಗ್ಗೆ ಆರಂಭವಾದ ಚಾತುರ್ಮಾಸ ಸ್ವೀಕಾರದ ಧಾರ್ಮಿಕ ವಿಧಿ ವಿಧಾನಗಳು, ಗಣಪತಿ ಪೂಜಾ, ಮೃತ್ತಿಕಾ ಪೂಜಾ, ವ್ಯಾಸ ಪೂಜಾ, ಚಾತುರ್ಮಾಸ ವೃತ ಸ್ವೀಕಾರ ವಿಧಿ ವಿಧಾನನಗಳು ನಡೆಯಿತು.
ಸಂಜೆ ದ್ವಾರಕಾನಾಥ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿ ಅವರು, ಈ ಹಿಂದೆ 1979ರಲ್ಲಿ ಹಿರಿಯ ಸ್ವಾಮೀಜಿ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಅವರು ಬೆಂಗಳೂರಿನ ಶ್ರೀ ದ್ವಾರಕಾನಾಥ ಭವನದಲ್ಲಿ ಚಾತುರ್ಮಾಸ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಇದೀಗ 45 ವರ್ಷಗಳ ಬಳಿಕ ಬೆಂಗಳೂರಿನ ಗೌಡ ಸಾರಸ್ವತ ಸಮಾಜ ಬಾಂಧವರಿಗೆ ಶ್ರೀ ರಾಮ್ ದೇವ್ ವೀರ ವಿಠಲ ದೇವರ ಹಾಗೂ ಸ್ವಾಮೀಜಿಗಳ ಸೇವಾ ಕೈಂಕರ್ಯವನ್ನು ಮಾಡುವ ಸುಯೋಗ ಮತ್ತೊಮ್ಮೆ ಒದಗಿ ಬಂದಿದೆ ಎಂದರು.
ಮುಂಬರುವ ವರ್ಷ ಶ್ರೀ ಗೋಕರ್ಣ ಪರ್ತಗಾಳಿ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಶ್ರೀಗಳು ಸಂಕಲ್ಪಿಸಿದ ಜಿ. ಎಸ್. ಬಿ ಸಮಾಜ ಬಾಂಧವರ ಮುಖೇನ 550 ಕೋಟಿ ರಾಮನಾಮ ಜಪವನ್ನು ಪಠಿಸುವ ಮಹತ್ತರ ಅಭಿಯಾನವು ಕಳೆದ ಏಪ್ರಿಲ್ 17 ಮೊದಲ್ಗೊಂಡು ಅಕ್ಟೋಬರ್ 18, 2025 ರವರೆಗೆ ನಡೆಯಲಿದ್ದು, ದೇಶಾದ್ಯಂತ 118 ಕ್ಕೂ ಅಧಿಕ ಜಪಕೇಂದ್ರ ಮತ್ತು ಉಪಜಪಕೇಂದ್ರಗಳಲ್ಲಿ ರಾಮನಾಮ ಜಪವು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ ಶ್ರೀಗಳು, ರಾಮನಾಮ ಜಪಾಭಿಯಾನ ಮುಗಿದ ಬಳಿಕ ಅ.19 ರಿಂದ ನ.26 ರವರೆಗೆ ಶ್ರೀರಾಮ ರಥ ಯಾತ್ರೆ ನಡೆಯಲಿದೆ.
ನ.27 ರಿಂದ ಡಿ.7 ರವರೆಗೆ ಪರ್ತಗಾಳಿ ಮಠದಲ್ಲಿ ರಾಮನಾಮ ಜಪದ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭ 77 ಅಡಿಯ ಶ್ರೀ ರಾಮಚಂದ್ರನ ಕಂಚಿನ ಪ್ರತಿಮೆಯನ್ನು ಮಠದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ಗುರುವಾರ ಕುಮಟಾದ ಮೊಕ್ಕಾಂನಿಂದ ಆಗಮಿಸಿದ ಶ್ರೀ ವಿದ್ಯಾಧೀಶ ಸ್ವಾಮಿಜಿ ಅವರನ್ನು ಶ್ರೀ ದ್ವಾರಕಾನಾಥ ಭವನದವರೆಗೆ ವೈಭವೋಪೇತ ಮೆರವಣಿಗೆಯಲ್ಲಿ ಕರೆತರಲಾಯಿತು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕೇಂದ್ರೀಯ ಸಮಿತಿಯ ಸದಸ್ಯರು, ಬೆಂಗಳೂರು ಚಾತುರ್ಮಾಸ ಸಮಿತಿಯ ಸದಸ್ಯರು, ವಿವಿಧ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ರಾಮನಾಮ ಜಪಕೇಂದ್ರಗಳಿಂದ ಆಗಮಿಸಿದ ಜಾಪಕರು, ಜಿಎಸ್‌ಬಿ ಸಮಾಜಬಾಂಧವರು, ಭಕ್ತರು ಚಾತುರ್ಮಾಸ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿಗುರು ಕೃಪೆಗೆ ಪಾತ್ರರಾದರು.