ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಾಶ್ಚ್ಯಾತ್ಯ ಸಂಸ್ಕೃತಿಯಿಂದ ಜಾನಪದ ನಶಿಸಿ ಹೋಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಜಾನಪದ ಯಾವುದೇ ಕಾರಣಕ್ಕೂ ಮರೆಯಾಗದೇ ಕಿವಿಯಿಂದ ಕಿವಿಗಳಿಗೆ, ಬಾಯಿಂದ ಬಾಯಿಗೆ ಪಸರಿಸುವ ಮೂಲಕ ನಮ್ಮ ಹೆಜ್ಜೆ ಹೆಜ್ಜೆಯೊಂದಿಗೆ ಸದಾ ಇರುತ್ತದೆ. ಜಾನಪದದ ಸಂಪತ್ತು, ಸಂಸ್ಕೃತಿ, ಪರಂಪರೆ ಮತ್ತು ಎಲ್ಲಾ ಆಯಾಮಗಳನ್ನು ಎಲ್ಲರಿಗೂ ತಿಳಿಯಪಡಿಸಲು ರಾಜ್ಯಾದ್ಯಂತ ವಿಕಸಿತ ಜಾನಪದ ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕನ್ನಡ ಜನಪದ ಪರಿಷತ್ತು ಉಪ್ಪುಂದ ಘಟಕದ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜ ಮಹಿಳೆಯರಿಂದ ಸಂದರ್ಭೋಚಿತವಾಗಿ ಗದ್ಯ, ಪದ್ಯಗಳ ಮೂಲಕ ಆರಂಭಗೊಂಡ ಮೌಕಿಕ ಪರಂಪರೆಯಾಗಿ ಬೆಳೆದು ಬಂದ ಜಾನಪದಕ್ಕೆ ಯಾವುದೇ ಚೌಕಟ್ಟಿಲ್ಲ. ಜನಪದ ಮೂಲೆಗುಂಪಾದರೆ ಅಥವಾ ನಶಿಸಿ ಹೋದರೆ ಇತಿಹಾಸ, ಪರಂಪರೆ ಬರಡಾದಂತೆ. ತೊಟ್ಟಿಲಿನಿಂದ ಚಟ್ಟದ ವರೆಗೆ ಜೀವನದಲ್ಲಿ ಜನಪದ ಹಾಸುಹೊಕ್ಕಾಗಿವೆ. ಜಾನಪದಕ್ಕೆ ಜಾತಿ, ಧರ್ಮ ಹಾಗೂ ಸಾವಿಲ್ಲ. ಇದೊಂದು ಅಲೌಕಿಕ ಸಂವಿಧಾನ. ಕೃಷಿ ಸಂಸ್ಕೃತಿಯಿಂದ ಹುಟ್ಟಿದ ಜಾನಪದದ ಪರಂಪರೆ, ಆಚರಣೆ, ನಂಬಿಕೆ ಎಲ್ಲದರ ಆಯಾಮಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಮೂಲಕ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಜಾನಪದದ ತೇರನ್ನು ಎಳೆಯಲು ಎಲ್ಲರೂ ಕೈಜೋಡಿಸೋಣ ಎಂದರು.
ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆವಹಿಸಿ ಶುಭಹಾರೈಸಿದರು. ಘಟಕದ ನೂತನ ಅಧ್ಯಕ್ಷ ಗಣೇಶ ದೇವಾಡಿಗ, ಕಾರ್ಯದರ್ಶಿ ಶಂಕರ ಉಪ್ಪುಂದ, ಖಜಾಂಚಿ ಅಶೋಕ ಎಸ್. ಜೈನ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಪದಪ್ರದಾನ ನೆರೆವೇರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರವಿ ನಾಯ್ಕ್ ಇದ್ದರು. ಕಜಾಪ ಜಿಲ್ಲಾಧ್ಯಕ್ಷ ಡಾ. ಗಣೇಶ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.