ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶಾದ್ಯಂತ 24 ಗಂಟೆಗಳ ಕಾಲ ತುರ್ತು ಸೇವೆ ಹೊರತುಪಡಿಸಿ ಇತರ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದು, ಶನಿವಾರ ಬೈಂದೂರು ಕುಂದಾಪುರ ಸೇರಿದಂತೆ ವಿವಿಧೆಡೆ ಸರಕಾರಿ ಹಾಗೂ ಖಾಸಗಿ ವೈದ್ಯರುಗಳು ಪ್ರತಿಭಟನೆ ನಡೆಸಿದ್ದಾರೆ.
ಬೈಂದೂರಿನಲ್ಲಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಯ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಸರಕಾರಿ ಹಾಗೂ ಖಾಸಗಿ ವೈದ್ಯರುಗಳು ಪ್ರತಿಭಟನೆ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಈ ವೇಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ ಅವರು ಮಾತನಾಡಿ, ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆ ವೈದ್ಯಕೀಯ ಸಮುದಾಯದ ಮನೋಸ್ಥೈರ್ಯವನ್ನು ಕುಗ್ಗಿಸಿದ್ದು, ವೈದ್ಯ ಸಮೂಹ ಇದನ್ನು ಗಂಭೀರವಾಗಿ ಖಂಡಿಸುತ್ತದೆ. ಘಟನೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ರಕ್ಷಣೆ ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಭಾರತೀಯ ವೈದ್ಯಕೀಯ ಸಂಘವು ದೇಶಾದ್ಯಂತ ತುರ್ತುಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ ಹಾಗೂ ಕಪ್ಪು ಪಟ್ಟಿ ಧರಿಸಿ ತುರ್ತುಸೇವೆಗಳನ್ನು ಮಾತ್ರ ನೀಡುತ್ತಾ ಮುಷ್ಕರವನ್ನು ಬೆಂಬಲಿಸುತ್ತೇವೆ ಎಂದರು. ಶಸ್ತ್ರಚಿಕಿತ್ಸೆಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದೆ. ಬೈಂದೂರಿನಯೂ ಸರಕಾರಿ ಹಾಗೂ ಖಾಸಗಿ ವೈದ್ಯರುಗಳು
ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ವೈದ್ಯರುಗಳು ಮನವಿ ಸಲ್ಲಿಸಿದರು. ಬೈಂದೂರು ಸರಕಾರಿ ಆಸ್ಪತ್ರೆ ವೈದ್ಯರುಗಳಾದ ಡಾ. ನಂದಿನಿ, ಡಾ. ವತ್ಸಲಾ ಹಾಗೂ ಖಾಸಗಿ ವೈದ್ಯರುಗಳಾದ ಡಾ. ಎಂ.ಎಸ್. ಶೆಟ್ಟಿ, ಡಾ. ಪ್ರವೀಣ್ ಶೆಟ್ಟಿ, ಡಾ. ವೆಂಕಟೇಶ್ ಉಪ್ಪುಂದ, ಡಾ. ಸರಸ್ವತಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.