ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:ಇಲ್ಲಿನ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಲೋಗೋ ಅನಾವರಣ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಸ್ರೋ ನಿವೃತ್ತ ವಿಜ್ಞಾನಿ ಸುರೇಶ ಕರ್ಣಿಕ್, ಖಾರ್ವಿಕೇರಿ ಶಾಲೆ ನಡೆದು ಬಂದ ದಾರಿ ಹಾಗೂ ದಾನಿಗಳ ಸಹಕಾರದಿಂದ ಬೆಳೆದು ನಿಂತ ಪರಿ ಅತ್ಯದ್ಭುತ. ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರ ನಡುವಿನ ಸಮ್ವಯತೆ ಶಾಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಶಾಲೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ವಿದ್ಯಾಭಿಮಾನಿಗಳು ಕೈಜೋಡಿಸಬೇಕು. ಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ರವಿಶಂಕರ್ ಖಾರ್ವಿ ಶುಭ ಹಾರೈಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಅಮೃತ ಮಹೋತ್ಸವದ ಲೋಗೋ ಅನಾವರಣಗೊಳಿಸಿ ಲೋಗೋದ ಪರಿಚಯ ಮಾಡಿದರು. ನಿವೃತ್ತ ಆಡಿಟರ್ ಕೇಶವ್ ಪ್ರಕಾಶ್, ಕೊಲ್ಲೂರು ನಾಗರಾಜ್ ಖಾರ್ವಿ, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಪ್ರಭಾರ ಮುಖ್ಯ ಶಿಕ್ಷಕಿ ಯಶೋಧ, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಉಷಾ ಕುಮಾರಿ ಸ್ವಾಗತಿಸಿದರು. ಸಹಶಿಕ್ಷಕ ಶಶಿಶಂಕರ ಎಚ್.ಎಂ. ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಅನುಷಾ ಸಿ. ಬಂಗೇರ ವಂದಿಸಿದರು.










