ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಸಂಸ್ಥೆಯಲ್ಲಿ ಗೋಕುಲಾಷ್ಟಮಿಯನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಸ್ವಪ್ನ ಆಪ್ತ ಸಮಾಲೋಚಕರು ಅವರು ಭಗವದ್ಗೀತೆಯ ವಿವಿಧ ಸಂದೇಶಗಳನ್ನು ಅರ್ಥಪೂರ್ಣವಾಗಿ ತಿಳಿಸುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು, ಅದರಲ್ಲೂ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಕಥೆಗಳನ್ನು ಹೇಳಿ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿದಾಗ ಮುಂದೆ ಎಂದು ಅವರು ತಮ್ಮ ಬದುಕಿನಲ್ಲಿ ಎಡುವುದಿಲ್ಲ ಎಂದರು. ಮಕ್ಕಳನ್ನು ಬೆಳೆಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರಕ್ಕಿಂತಲೂ ಪೋಷಕರ ಪಾತ್ರ ಹಿರಿದಾದ್ದದ್ದು ಅದನ್ನು ಅರಿತು ಮಕ್ಕಳನ್ನು ಬೆಳೆಸಿದ್ದಾದರೆ ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಬೇರೆ ಏನು ಬೇಕಿಲ್ಲ ಎಂಬುದನ್ನು ಅರ್ಥಪೂರ್ಣವಾಗಿ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟನ್ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ನಮ್ಮ ಸನಾತನ ಧರ್ಮದ ಉಳಿವಿಗಾಗಿ ಇಂತಹ ಆಚರಣೆಗಳು ತುಂಬಾ ಮುಖ್ಯ,ಅದರ ಮಹತ್ವವನ್ನು ಈ ಹಂತದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಜೊತೆ ಸೇರಿ ಮಾಡಬೇಕಿದೆ ಎಂದು ತಿಳಿಸಿದರು.
ಶಾಲಾ ಕಟ್ಟಡವನ್ನು ತಳಿರು ತೋರಣಗಳಿಂದ ಮತ್ತು ಕಟ್ಟಡದ ಮುಂಭಾಗದಲ್ಲಿ ರಂಗುರಂಗಿನ ರಂಗೋಲಿಗಳ ಚಿತ್ತಾರ ಮೈದಳೆದು ನಿಂತಿದ್ದವು. ಪುಟಾಣಿ ಮಕ್ಕಳು ರಾಧಾಕೃಷ್ಣರ ವೇಷದಲ್ಲಿ ಮತ್ತು ತಾಯಂದಿರು ಯಶೋದೆಯ ವೇಷ ಭೂಷಣದಲ್ಲಿ ಬಂದು ಅಷ್ಟಮಿ ಮೆರಗು ಹೆಚ್ಚಿಸಿದರು .
ಗೋ ಪೂಜೆಯೊಂದಿಗೆ ಆರಂಭಗೊಂಡ ಗೋಕುಲಾಷ್ಟಮಿ, ಮುದ್ದು ಕೃಷ್ಣನ ಭಜನೆ, ಶ್ಲೋಕ, ಹಾಡಿನ ಮೂಲಕ ಮೆರುಗು ಪಡೆಯಿತು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಮುದ್ದು ರಾಧಾ, ಮುದ್ದು ಕೃಷ್ಣ ಮತ್ತು ಯಶೋದೆಯ ವೇಷಭೂಷಣಕ್ಕೆ ಸ್ಪರ್ಧೆ ಏರ್ಪಡಿಸಲಾಗಿತ್ತು, ಇದರಲ್ಲಿ ಆಯ್ಕೆಯಾದ ವಿಜೇತರಿಗೆ ಅತಿಥಿಗಳಿಂದ ಪ್ರಮಾಣ ಪತ್ರ ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು.ಇದರೊಂದಿಗೆ ಒಂದಿಷ್ಟು ಮನೋರಂಜನೆಗಾಗಿ ಶಿಕ್ಷಕರು, ಪೋಷಕರು ಮತ್ತು ಪುಟಾಣಿಗಳು ನೃತ್ಯ, ಹಾಡು, ಶ್ಲೋಕವನ್ನು ಹೇಳಿ ಅಷ್ಟಮಿಯ ಸಡಗರವನ್ನು ಇನ್ನಷ್ಟು ಹೆಚ್ಚಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಜನ್ಮಾಷ್ಟಮಿಯ ವಿಶೇಷವಾದ ಮೊಸರು ಕುಡಿಕೆ ಆಟವನ್ನು ಪುಟಾಣಿ ರಾಧಾಕೃಷ್ಣರಿಂದ ಆಡಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ರಾಧಾ ಕೃಷ್ಣರ ಉಯ್ಯಾಲೆಯಲ್ಲಿ ಪುಟಾಣಿಗಳು ತಮ್ಮ ಪೋಷಕರ ಜೊತೆ ಕುಳಿತು ಪೋಟೋ ಕ್ಲಿಕ್ಕಿಸಿ ತಾವು ರಾಧಾ ಕೃಷ್ಣರಾಗಿ ಆನಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್, ಶಿಕ್ಷಕಿಯರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಯೋಜಕಿ ವಿಶಾಲ ಶೆಟ್ಟಿ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.