ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್‌ನಿಂದ ಆಯಿಲ್ ಸೋರಿಕೆಯಾದ ಪರಿಣಾಮ 25ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಮಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಬೆಳಿಗ್ಗೆ 32 ಟನ್ ಸೋಪ್ ಆಯಿಲ್ (ಪಾಮ್ ಪ್ಯಾಟಿ ಆಸಿಡ್ ಡಿಸ್ಟಿಲೇಟ್) ತುಂಬಿದ್ದ ಬೃಹತ್ ಗಾತ್ರದ ಟ್ಯಾಂಕರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಟ್ಯಾಂಕರ್ ಅಡಿಭಾಗದಲ್ಲಿ ಆಯಿಲ್ ಸೋರಿಕೆಯಾಗುತ್ತಿದ್ದು ಅದೇ ವೇಳೆ ಮಳೆಯಿದ್ದ ಕಾರಣ ವಾಹನದ ಕನ್ನಡಿಯಲ್ಲಿ ಚಾಲಕನಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್ ಸಾಗಿದ ದಾರಿಯಲ್ಲಿ ಮತ್ತೆ ಪ್ರಯಾಣಿಸಿದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುವಂತಾಗಿದ್ದು ಲಘು ವಾಹನಗಳು ಬ್ರೇಕ್ ತಗುಲದೆ ಸಣ್ಣಪುಟ್ಟ ಅವಘಡ ಸಂಭವಿಸಿತ್ತು. ಪ್ರಾಥಮಿಕ ವರದಿ ಪ್ರಕಾರ 25-30 ಮಂದಿ ಬಿದ್ದಿದ್ದು 6 ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿದ್ದ ಅಪಘಾತದಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ತ್ರಾಸಿ ಸಮೀಪ ತೆರಳುವಾಗ ಮಳೆ ನಿಂತಿದ್ದರಿಂದ ಚಾಲಕನಿಗೆ ಹಿಂದೆ ಆಯಿಲ್ ಸೋರಿಕೆ ಕಂಡುಬಂದಿದ್ದು ತ್ರಾಸಿ ಮರವಂತೆ ಬಳಿ ಟ್ಯಾಂಕರ್ ಬದಿಗಿಟ್ಟು ಸಂಬಂದಪಟ್ಟವರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಸಂಚಾರ ಪೊಲೀಸರು ಮುನ್ನೆಚ್ಚರಿಕೆ ವಹಿಸಿವಂತೆ ಸಾರ್ವಜನಿಕರಿಗೆ ತಿಳಿಸಿದ್ದು, ತೆಕ್ಕಟ್ಟೆಯಿಂದ ಹೆಮ್ಮಾಡಿಯವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರು. ಪೊಲೀಸರಿಗೆ ಹಲವೆಡೆ ಸಾರ್ವಜನಿಕರು ಸಹಕಾರ ನೀಡಿದರು. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರು ಹಾಯಿಸಿ ರಸ್ತೆಯ ಮೇಲೆ ಬಿದ್ದಿರುವ ಸೋಪ್ ಆಯಿಲ್ ಕ್ಲೀನ್ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನ 12 ಗಂಟೆಯವರೆಗೆ 15 ಕಿಮೀ ವ್ಯಾಪ್ತಿಯಲ್ಲಿ ಒನ್ ವೇ ಮಾಡಲಾಗಿದ್ದು ಸಂಭಾವ್ಯ ಅಪಘಾತ ತಪ್ಪಿಸಲು ಮುಂಜಾಗೃತಾ ಕ್ರಮ ವಹಿಸಲಾಗಿತ್ತು.