ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ಯಾಂಕರ್‌ನಿಂದ ಸೋಪ್ ಆಯಿಲ್ ಸೋರಿಕೆಯಾದ ಪರಿಣಾಮ ಹಬ್ಬದ ಸಂಭ್ರಮದಲ್ಲಿದ್ದ ಕುಂದಾಪುರದ ಜನತೆ ಸರಣಿ ಅಪಘಾತಗಳನ್ನು ಕಾಣುವಂತಾಗಿತ್ತು. ಸೋಪ್ ಆಯಿಲ್ ಸೋರಿಕೆಯಿಂದಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ 30ಕ್ಕೂ ಅಧಿಕ ಬೈಕ್ ಸವಾರರ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದು, ಈ ಪೈಕಿ 6ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಆದದ್ದೇನು?
ಮಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಶನಿವಾರ ಬೆಳಿಗ್ಗೆ 32 ಟನ್ ಸೋಪ್ ಆಯಿಲ್ (ಪಾಮ್ ಪ್ಯಾಟಿ ಆಸಿಡ್ ಡಿಸ್ಟಿಲೇಟ್) ತುಂಬಿದ್ದ ಬೃಹತ್ ಗಾತ್ರದ ಟ್ಯಾಂಕರ್ ತೆರಳುತ್ತಿದ್ದು,ಈ ಮಧ್ಯೆ ತೆಕ್ಕಟ್ಟೆಯಿಂದ ಟ್ಯಾಂಕರ್ ಅಡಿಭಾಗದಲ್ಲಿ ಆಯಿಲ್ ಸೋರಿಕೆಯಾಗಿದೆ. ಅದೇ ಸಮಯದಲ್ಲಿ ಮಳೆಯಿದ್ದ ಕಾರಣ ಇದು ಚಾಲಕನಿಗೆ ಗಮನಕ್ಕೂ ಬಂದಿರಲಿಲ್ಲ. ಹೀಗಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್ನಿಂದ ಆಯಿಲ್ ಸೋರಿಕೆಯಾಗಿದೆ. ಇದೇ ಮಾರ್ಗದಲ್ಲಿ ಸಾಗಿದ ತೆರಳಿದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುವಂತಾಗಿದ್ದು ಲಘು ವಾಹನಗಳು ಬ್ರೇಕ್ ತಗುಲದೆ ಸಣ್ಣಪುಟ್ಟ ಅವಘಡ ಸಂಭವಿಸಿತ್ತು. /ಕುಂದಾಪ್ರ ಡಾಟ್ ಕಾಂ/
ಘಟನೆಯಲ್ಲಿ ಒಟ್ಟು 25-30 ಮಂದಿ ಬಿದ್ದಿದ್ದು 6 ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿದ್ದ ಅಪಘಾತದಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ತ್ರಾಸಿ ಸಮೀಪ ತೆರಳುವಾಗ ಮಳೆ ನಿಂತಿದ್ದರಿಂದ ಚಾಲಕನಿಗೆ ಹಿಂದೆ ಆಯಿಲ್ ಸೋರಿಕೆ ಗಮನಕ್ಕೆ ಬಂದಿದ್ದು, ತ್ರಾಸಿ ಮರವಂತೆ ಬಳಿ ಟ್ಯಾಂಕರ್ ಬದಿಗಿಟ್ಟು ಸಂಬಂದಪಟ್ಟವರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ. /ಕುಂದಾಪ್ರ ಡಾಟ್ ಕಾಂ/
ಪೊಲೀಸರು – ಸಾರ್ವಜನಿಕರಿಂದ ಮುನ್ನೆಚ್ಚರಿಕೆ:
ಘಟನೆಯ ಬೆಳಕಿಗೆ ಬರುತ್ತಿದ್ದಂತೆ ಅಲ್ಲಲ್ಲಿ ಸಾರ್ವಜನಿಕರೇ ವಾಹನ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ವಹಿಸುವಂತೆ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ತೆಕ್ಕಟ್ಟೆ ಹಾಗೂ ಕುಂದಾಪುರ ಸಂಗಮ್‌ನಿಂದ ಹೆಮ್ಮಾಡಿಯ ತನಕ ಅಗತ್ಯವಿರುವಲ್ಲಿ ಟ್ಯಾಂಕರ್ ಸಾಗಿದ ಮಾರ್ಗವನ್ನು ಕುಂದಾಪುರದ ಸಂಚಾರ ಪೊಲೀಸರು ಬಂದ್ ಮಾಡಿ, ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಹೈವೆ ಗುತ್ತಿಗೆ ಸಿಬ್ಬಂದಿಗಳು ರಸ್ತೆಯ ಮೇಲೆ ಬಿದ್ದಿರುವ ಸೋಪ್ ಆಯಿಲ್ ಕ್ಲೀನ್ ಮಾಡಲು ನೀರು ಹಾಯಿಸಿದರು. ಮಧ್ಯಾಹ್ನದ ವೇಳೆಗೆ ಬಹುತೇಕ ಸಮಸ್ಯೆ ಪರಿಹಾರ ಕಂಡಿದ್ದು, ಸಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.