ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖ್ಯಾತ ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಇಂದು ಹೊಸನಗರ ತಾಲೂಕು ನಿಟ್ಟೂರು ಬಳಿಯ ಬಾಮೆ ಎಂಬಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಹೆಜ್ಜೆನು ಕಚ್ಚಿದ ಪರಿಣಾಮ ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ:
ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ಇಷ್ಟಕಾಮ್ಯ ಎಂಬ ಕನ್ನಡ ಚಿತ್ರದ ಶೂಟಿಂಗ್ ಗಾಗಿ 60ಜನರ ಚಿತ್ರತಂಡ ಇಂದು ಕೊಲ್ಲೂರು ಸಮೀಪದ ನಿಟ್ಟೂರಿಗೆ ಬಂದಿಳಿದಿತ್ತು. ಬಾಮೆ ತೂಗು ಸೇತುವೆ ಸಮೀಪ ಶೂಟಿಂಗ್ ನಡೆಸುವುದು ನಿಗದಿಯಾಗಿತ್ತು. ಬೆಳಿಗ್ಗೆ 10:30ರ ಹೊತ್ತಿಗೆ ಕ್ಯಾಮರಾ ಪೊಜಿಷನ್ ನೋಡಲು ಸ್ವಲ್ಪ ಮುಂದೆ ತೆರಳಿದ ನಾಗತಿಹಳ್ಳಿಗೆ ಒಮ್ಮೇಲೆ ಎಲ್ಲಿಂದಲೋ ಬಂದ ಜೇನು ದಾಳಿ ಇಟ್ಟಿದೆ. ಕೂಡಲೇ ಚಿತ್ರತಂಡದ ಇತರರಿಗೆ
ತಿಳಿಸಿದ ನಾಗತಿಹಳ್ಳಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅಷ್ಟರೊಳಗೆ ಜೇನು ಇತರರಿಗೂ ದಾಳಿ ಮಾಡಲು ಶುರುವಿಟ್ಟುಕೊಂಡಿತ್ತು. ನಾಗತಿಹಳ್ಳಿಯವರನ್ನು ರಕ್ಷಿಸಲು ಬಂದ ನಾಲ್ಕೈದು ಮಂದಿಗೂ ಜೇನು ದಾಳಿ ಮಾಡಿದೆ. ನಾಗತಿಹಳ್ಳಿ ಹಾಗೂ ಕೃಷ್ಣ ಎಂಬುವವರಿಗೆ ಕಣ್ಣು ಹಾಗೂ ತಲೆಯ ಭಾಗಕ್ಕೆ ಜೇನು ದಾಳಿ ಮಾಡಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಕೊಲ್ಲೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಅಲ್ಲಿಂದ ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ನಾಗತಿಹಳ್ಳಿಯವರನ್ನು ಐಸಿಯು ಘಟಕಕ್ಕೆ ದಾಖಲಿಸಿದ್ದರೇ, ಕಷ್ಣರನ್ನು ಜನರಲ್ ವಾರ್ಡ್ ಗೆ ದಾಖಲಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ)
ನಾಗತಿಹಳ್ಳಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ವೈದ್ಯರು ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ. ನಾಳೆ ಚಿತ್ರದ ಶೂಟಿಂಗ್ ಮುಂದುವರಿಸುವಂತೆ ನಾಗತಿಹಳ್ಳಿ ತಿಳಿಸಿದ್ದಾಗಿ ಪ್ರೋಡಕ್ಷನ್ ಮ್ಯಾನೆಜರ್ ಶರತ್ ತಿಳಿಸಿದ್ದಾರೆ.
-ಸುನಿಲ್ ಬೈಂದೂರು