ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ 2023-24ನೇ ಸಾಲಿನ ಮಹಾಸಭೆಯು ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ಶುಕ್ರವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆನಂದ ಬಿಲ್ಲವ ಮಾತನಾಡಿ, ವರದಿ ವರ್ಷದಲ್ಲಿ ಒಟ್ಟು 13291 ಸದಸ್ಯರೊಂದಿಗೆ 1.72 ಕೋಟಿ ರೂ. ಪಾಲು ಬಂಡವಾಳವನ್ನು ಹೊಂದಿದೆ. ವರ್ಷ ಅಂತ್ಯಕ್ಕೆ 37.04 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು, ಹೊರಬಾಕಿ ಸಾಲ 1.53 ಕೋಟಿ ರೂ. ಇದೆ. 19.12 ಕೋಟಿ ರೂ.ಗಳನ್ನು ವಿವಿಧ ಸಂಘ/ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಂಘವು 42.65 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಪಾಲು ಮುನಾಫೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘದ ವ್ಯಾಪ್ತಿಯ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಘದ ನಿರ್ದೇಶಕರಾದ ಶ್ರೀನಿವಾಸ ಜತ್ತನ್ ಪೂಜಾರಿ, ಹರೀಶ ಮೇಸ್ತ, ಕೆ.ಮಾಧವ ಖಾರ್ವಿ, ಜಿ.ಗೋಪಾಲ ನಾಯ್ಕ್, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ ಡಿ.ಹೆಗ್ಡೆ, ನಾಗರಾಜ ಎಂ., ಲಕ್ಷ್ಮಣ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ವಾಸುದೇವ ಶೇರುಗಾರ್ ಸ್ವಾಗತಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ಗಂಗೊಳ್ಳಿ ಅವರು 2024-2025ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಹಾಗೂ 2023-24ನೇ ಸಾಲಿನ ಲಾಭಾಂಶ ವಿಂಗಡನೆಯನ್ನು ಮಂಡಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಹಿರಿಯ ಗುಮಾಸ್ತ ಮಾಧವ ಖಾರ್ವಿ ಪ್ರಾರ್ಥಿಸಿದರು. ತಲ್ಲೂರು ಶಾಖಾ ವ್ಯವಸ್ಥಾಪಕ ರಾಜ್‌ಗೋಪಾಲ ಪೂಜಾರಿ ವಂದಿಸಿದರು.