ಕುಂದಾಪುರ: ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಮಡಿಕೇರಿಲ್ಲಿ ನಡೆದ ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಕೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಂದು ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜನಪರ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸ ಗಳಿಸಬೇಕಾಗಿದ್ದ ಸರಕಾರ ಜನವಿರೋಧಿ ನಿಲುವನ್ನು ತಾಳುತ್ತಿರುವುದು ದುರದೃಷ್ಟಕರ. ಇತ್ತಿಚಿಗೆ ರಾಜ್ಯದಲ್ಲಿ ನಡೆದ ಸಾವು-ನೋವುಗಳನ್ನು ಗಮನಿಸಿದರೇ ಸರಕಾರ ಬೇಜವಾಬ್ದಾರಿ ನಡುವಳಿಕೆಯ ದರ್ಶನವಾಗುತ್ತದೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ. ಬಿಜೆಪಿಯ ಸರಕಾರವಿರುವಾಗ ಯಾವುದೇ ಕೋಮು ಸಂಘರ್ಷಗಳಿಗೆ ಅವಕಾಶ ನೀಡದೇ ಜನರು ಅನ್ಯೂನ್ಯತೆಯಿಂದ ಬದುಕುವಂತೆ ಮಾಡಿತ್ತು, ಸಮಾಜದ ಎಲ್ಲಾ ಧರ್ಮದ ಜನರೂ ಒಂದೇ ಎಂಬ ಭಾವನೆಯಿಂದ ಆಡಳಿತ ನಡೆಸಿತ್ತು. ಸಿದ್ದರಾಮಯ್ಯನವರ ಸರಕಾರ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಿ ಸಮಾಜದ ಸಂಘರ್ಷಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.
ಇತ್ತಿಚಿನ ಘಟನೆಗಳನ್ನು ಅವಲೋಕಿಸಿದಾಗ ರಾಜ್ಯ ಸರಕಾರ ಯಾವುದೋ ಅಜೆಂಡಾಕ್ಕೆ ತಲೆಭಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಡುವಂತೆ ಮಾಡಿದೆ. ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಹೆಸರಿನಲ್ಲಿ ರಾಜ್ಯದ ಜನರನ್ನು ಗೊಂದಲಕ್ಕೆ ನೂಕಿರುವುದಲ್ಲದೇ, ಅಶಾಂತಿಯನ್ನೆಬ್ಬಿಸಿದೆ. ಇದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದವರು ಆರೋಪಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೆಳ್ವೆ ವಸಂತಕುಮಾರ್ ಶೆಟ್ಟಿ, ಕುಂದಾಪುರ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್ ಕುಮಾರ್, ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್, ಸುಬ್ರಹ್ಮಣ್ಯ ಹೊಳ್ಳು, ಅರವಿಂದ ಕೋಟೇಶ್ವರ ಸೇರಿದಂತೆ ವಿ.ಎಚ್.ಪಿಯ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಹೆದ್ದಾರಿ ತಡೆ ನಡೆದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಪ್ರತಿಭಟನೆಯ ಹಿನ್ನಲೆಯಲ್ಲಿ ಬಿಗಿ ಬಂದೋವಸ್ಥ್ ಏರ್ಪಡಿಸಲಾಗಿತ್ತು.
ಬೈಂದೂರು ಶಾಸಕರಿಗೂ ತಟ್ಟಿದ ಪ್ರತಿಭಟನೆಯ ಬಿಸಿ:
ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾವು ಬೈಂದೂರು ಶಾಸಕ ಗೋಪಾಲ ಪೂಜಾರಿಯವರಿಗೂ ತಟ್ಟಿತ್ತು. ಕಾರ್ಯನಿಮಿತ್ತ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೈಂದೂರು ತೆರಳಬೇಕಿದ್ದ ಶಾಸಕರ ವಾಹನವೂ ಗಾಂಧಿ ಮೈದಾನದ ಬಳಿ ಇತರ ವಾಹನಗಳೊಂದಿಗೆ ಜಾಮ್ ಆಗಿತ್ತು. ಸುಮಾರು 10ನಿಮಿಷಕ್ಕೂ ಅಧಿಕ ಕಾಲ ವಿಧಿ ಇಲ್ಲದೇ ವಾಹನವನ್ನು ಅಲ್ಲಿಯೇ ನಿಲ್ಲಿಸಬೇಕಾಯಿತು. ಈ ಮಧ್ಯೆ ಪೊಲೀಸರು ಸ್ಥಳಕ್ಕಾಗಮಿಸಿ ಶಾಸಕರ ವಾಹನಕ್ಕೆ ತೆರಳಲು ಅನುವು ಮಾಡಿಕೊಟ್ಟರು. ಹಿಂದೂ ಸಂಘಟನೆಯ ಕಾರ್ಯಕರ್ತರು ಇದನ್ನು ಪ್ರತಿಭಟಿಸಲು ಮುಂದಾದಾಗ ವಾಹನವನ್ನು ಉಡುಪಿಯ ಕಡೆಗೆ ತಿರುಗಿಸಲಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಬೈಂದೂರಿನಲ್ಲಿಯೂ ಪ್ರತಿಭಟನೆ, ರಸ್ತೆತಡೆ:
ಬೈಂದೂರಿನಲ್ಲಿಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಲಾಯಿತು. ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುತ್ತಿರುವ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಭಾವಚಿತ್ರವನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ದಿನೇ ದಿನೇ ಶಾಂತಿ ಕದಡುವ ಕೆಲಸವಾಗುತ್ತಿದೆ. ಆದರೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ, ತಾಪಂ ಸದಸ್ಯ ಪ್ರಸನ್ನಕುಮಾರ್, ಬೈಂದೂರು ವಿಹಿಪಂ ಅಧ್ಯಕ್ಷ ಬಾಲಕೃಷ್ಣ ಬೈಂದೂರು, ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ. ಎಸ್. ಸುರೇಶ್ ಶೆಟ್ಟಿ, ಧರ್ಮಜಾಗೃತಿ ವೇದಿಕೆಯ ಶ್ರೀಧರ ಬಿಜೂರ್, ಪಡುವರಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಡಿ., ಮಾಜಿ ಅಧ್ಯಕ್ಷ ಸುರೇಶ ಬಟವಾಡಿ, ಶರತ್ ಶೆಟ್ಟಿ
ಮೊದಲಾದವರು ಉಪಸ್ಥಿತರಿದ್ದರು. ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಿ ಕೊನೆಗೆ ಬಿಡುಗಡೆಗೊಳಿಸಲಾಯಿತು.