ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವೆ, ಸ್ನೇಹ, ವೈವಿಧ್ಯತೆ, ಸಮಗ್ರತೆ ಮತ್ತು ನಾಯಕತ್ವ ಎಂಬ ಮೌಲ್ಯದ ಮೂಲಕ ನಿರಂತರವಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಾ ಬಂದಿರುವ ರೋಟರಿ ಸಂಸ್ಥೆ ತನ್ನದೇ ಆದ ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಆರೋಗ್ಯ, ಶಿಕ್ಷಣ, ಸಮುದಾಯದ ಅರಿವು ಹಾಗೂ ಅಭಿವೃದ್ಧಿಯಲ್ಲಿ ರೋಟರಿ ಹೆಚ್ಚಿನ ಕಾರ್ಯ ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಸಿಎ ದೇವ್ ಆನಂದ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜರುಗಿದ ಬೈಂದೂರು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರೋಟರಿ ಸದಸ್ಯರು ತಮ್ಮ ಉದ್ಯೋಗ ಹಾಗೂ ಸೇವೆಯಲ್ಲಿ ನೈತಿಕ ಮೌಲ್ಯಗಳನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುವುದರಿಂದ ಸಮುದಾಯದಲ್ಲಿ ಗೌರವ ಹೆಚ್ಚುತ್ತದೆ. ಪ್ರತಿ ಸದಸ್ಯರಿಗೂ ನಾಯಕರಾಗುವ ಸಮಾನ ಅವಕಾಶವಿದ್ದು ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರಾಗುವ ತನಕವೂ ಮಕ್ತ ಅವಕಾಶವಿದೆ ಎಂದರು.
ಈ ಸಂದರ್ಭ ಬೈಂದೂರು ರೋಟರಿ ಟ್ರಸ್ಟ್ ವತಿಯಿಂದ 5 ಮಂದಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ, ಮಹಿಳಾ ರೊಟೆರಿಯನ್ಗಳ ಮೂಲಕ 5 ಮಂದಿ ವಿದ್ಯಾರ್ಥಿಗಳಿಗೆ ಹಾಗೂ ದಾನಿಗಳಾದ ದೀಪಿಕಾ ಲಕ್ಷ್ಮೀಪ್ರಸಾದ್ ಅವರು ನೀಡಿದ ದೇಣಿಗೆಯಿಂದ ಓರ್ವ ವಿದ್ಯಾರ್ಥಿಗೆ ಧನಸಹಾಯ ಮಾಡಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಕೆ. ಬಾಬು ಶೆಟ್ಟಿ ಹಾಗೂ 2025-26ನೇ ಸಾಲಿಗೆ ಸಹಾಯಕ ಗವರ್ನರಾಗಿ ಆಯ್ಕೆಯಾದ ಐ. ನಾರಾಯಣ ಅವರನ್ನು ಅಭಿನಂದಿಸಲಾಯಿತು. ಇಬ್ಬರು ನೂತನ ರೋಟರಿ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ ಅವರು ಬಿಂದುವಾಣಿ ಬುಲೆಟಿನ್ ಬಿಡುಗಡೆಗೊಳಿಸಿದರು. ಬೈಂದೂರು ರೋಟರಿ ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಟರಿಯ ಫಸ್ಟ್ ಲೇಡಿ ಸಿಎ ರೇಖಾ ದೇವ್ ಆನಂದ್, ವಲಯ ಸೇನಾನಿ ಪ್ರದೀಪ್ ಡಿ.ಕೆ ಉಪಸ್ಥಿತರಿದ್ದರು.
ಬೈಂದೂರು ರೋಟರಿ ಅಧ್ಯಕ್ಷ ಮೋಹನ್ ರೇವಣ್ಕರ್, ಕಾರ್ಯದರ್ಶಿ ಸುನಿಲ್ ಹೆಚ್. ಜಿ. ವರದಿ ವಾಚಿಸಿ, ವಂದಿಸಿದರು. ರೂಪಾ ರೇವಣ್ಕರ್ ಪ್ರಾರ್ಥಿಸಿದರು. ಬೈಂದೂರು ರೋಟರಿಯ ಸಾರ್ಜೆಂಟ್-ಅಟ್-ಆರ್ಮ್ಸ್ ಜತೀಂದ್ರ ಮರವಂತೆ ಕಾರ್ಯಕ್ರಮ ನಿರೂಪಿಸಿದರು.