ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈಗಿರುವ ರಾಷ್ಟ್ರೀಯ ಪಿಂಚಣಿ ಯೋಚನೆ (NPS) ಹಾಗೂ ಕೇಂದ್ರ ಸರಕಾರ ಹೊಸತಾಗಿ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆಯನ್ನು (UPS) ಕೈಬಿಟ್ಟು ಹಳೆ ಪಿಂಚಣಿ ಯೋಜನೆ (OPS) ಮರು ಸ್ಥಾಪಿಸಿದರೆ ಮಾತ್ರ ಸರಕಾರಿ ನೌಕರರಿಗೆ ನ್ಯಾಯ ಒದಗಿಸಿದಂತಾಗಲಿದೆ. ಸರಕಾರವು ನೌಕರರ ಬೇಡಿಕೆಯನ್ನು ಪರಾಮರ್ಶಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಒತ್ತಾಯಿಸಿದ್ದಾರೆ.
ಅವರು ಗುರುವಾರ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಬೈಂದೂರು ತಾಲೂಕು ಘಟಕದಿಂದ ಬೈಂದೂರು ತಹಶಿಲ್ದಾರರ ಮೂಲಕ ರಾಜ್ಯ ಸರಕಾರ ಮುಖ್ಯಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
2014ರಿಂದ ಎನ್.ಪಿ.ಎಸ್ ವಿರುದ್ಧ ಹೋರಾಟ ನಡೆಸಲಾಗುತ್ತಿದ್ದು, ಅದರ ಪರಿಣಾಮವಾಗಿ ಯು.ಪಿ.ಎಸ್ ಎಂಬ ಹೊಸ ಕಾನೂನನ್ನು ತಂದಿರುವ ಕೇಂದ್ರ ಸರಕಾರ ಎಂಪ್ಲಾಯರ್ ಫಂಡ್ ಶೇ.18ಕ್ಕೆ ಏರಿಸಿ ಶೇ.50 ಖಾತ್ರಿ ಇರುವ ಪಿಂಚಣಿ ನೀಡುವುದಾಗಿ ಹೇಳಿದೆ. ಅದರೆ ಹಳೆ ಪಿಂಚಣಿ ಪದ್ದತಿಯಲ್ಲಿನ ಎಲ್ಲಾ ಲೋಪದೋಷಗಳು ಯು.ಪಿ.ಎಸ್ ನಲ್ಲಿದೆ. ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಯು.ಪಿ.ಎಸ್ ವ್ಯವಸ್ಥೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇವೆ ಹಾಗೂ ರಾಜ್ಯ ಸರಕಾರ ಎನ್.ಪಿ.ಎಸ್ ಪರಾಮರ್ಶೆಗೆ ರಚಿಸಿರುವ ಸಮಿತಿಯನ್ನು ವಿರೋಧಿಸುತ್ತೇವೆ. ರಾಜ್ಯ ಸರಕಾರ ನೌಕರರಿಗೆ ನೀಡಿರುವ ಭರವಸೆಯಂತೆ ಒ.ಪಿ.ಎಸ್ ಜಾರಿಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್. ಅವರ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭ ಎನ್.ಪಿ.ಎಸ್. ಸಂಘಟನೆಯಿಂದ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಬೈಂದೂರು ತಾಲೂಕು ಘಟಕದ ಕಾರ್ಯದರ್ಶಿ ಉದಯ್ ಕುಮಾರ್ ಎಂ.ಪಿ., ಖಜಾಂಚಿ ರಾಜೇಶ್ ಖಾರ್ವಿ, ವಿವಿಧ ಸರಕಾರಿ ಸಂಸ್ಥೆಗಳಿಂದ ಡಾ. ರಾಜೇಶ್, ವಸಂತ್, ರುಕ್ಕನಗೌಡ, ಶ್ರೀದೇವಿ, ಆನಂದ ಪೂಜಾರಿ, ಗೋಪಾಲಕೃಷ್ಣ ಆಚಾರಿ, ಗಣೇಶ್ ಮೇಸ್ತ, ವಿರೇಶ್, ಸರಕಾರಿ ನೌಕರರ ಸಂಘದ ವಿಶ್ವನಾಥ ಪೂಜಾರಿ, ಮನೋಹರ ಶೆಟ್ಟಿ, ಗಣಪತಿ ಹೋಬಳಿದಾರ್, ನಾಗರತ್ನ ಮೊದಲಾದವರು ಉಪಸ್ಥಿತಿರಿದ್ದರು.