ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಾನ್ಯುಯಲ್ ಸ್ಕ್ಯಾವೆಂಜರ್ಸ್ ವೃತ್ತಿಯನ್ನು ಈ ಹಿಂದೆ ನಿರ್ವಹಿಸುತ್ತಿದ್ದವರಿಗೆ ಸರಕಾರದ ವಿವಿಧ ಸೌಲಭ್ಯಗಳು ಸೇರಿದಂತೆ ಪುನರ್ವಸತಿ ಯೋಜನೆಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಡಾ. ಕೆ. ವಿದ್ಯಾ ಕುಮಾರಿ ಸೂಚನೆ ನೀಡಿದರು.
ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಯು ಈಗಾಗಲೇ ದೇಶಾದ್ಯಂತ ನಿಷೇಧವಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಅನ್ನು ನೇಮಿಸಿಕೊಂಡು ಕೆಲಸ ಕಾರ್ಯವನ್ನು ಮಾಡಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಗುರುತಿಸಲಾದ ಮಾನ್ಯುಯಲ್ ಸ್ಕ್ಯಾವೆಂಜರ್ಸ್ಗಳಿಗೆ ಹಾಗೂ ಮೃತಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್ಸ್ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ, ಒಂದು ಬಾರಿ ನಗದು ಸಹಾಯ, ಮನೆ, ನಿವೇಶನ, ಶಿಕ್ಷಣ, ವಿದ್ಯಾರ್ಥಿ ವೇತನ, ಉದ್ಯೋಗ, ಸಾಲ ಸೌಲಭ್ಯ ಇತ್ಯಾದಿ ರೀತಿಯಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದರು.
ಜಿಲ್ಲೆಯ ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಮನೆ, ಆಸ್ಪತ್ರೆ, ಅಪಾರ್ಟ್ಮೆಂಟ್, ಕಂಪನಿ ಸೇರಿದಂತೆ ಯಾವುದೇ ಕಡೆಯಲ್ಲಿ ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ ಗುಂಡಿ ಕಟ್ಟಿಕೊಂಡಲ್ಲಿ ಸ್ವಚ್ಛಗೊಳಿಸಲು ಘನ ತ್ಯಾಜ್ಯ ವಿಲೇವಾರಿ ವಾಹನಗಳ ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 14420 ಹಾಗೂ ಗ್ರಾಮೀಣ ಪ್ರದೇಶದಲ್ಲಿ 9480985555 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಶೇ. 5 ರಷ್ಟು ಪ್ರವೇಶ ನೀಡಲು ಕ್ರಮವಹಿಸಬೇಕು ಎಂದರು.
ಪೌರ ಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದ ಕರ್ತವ್ಯ ನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ, ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದರ ಬಳಕೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಪೌರ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಪೌರಾಡಳಿತದ ನಿರ್ದೇಶನದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಬೇಕು. ಅವರುಗಳಿಗೆ ವಿತರಿಸುವ ಉಪಾಹರವು ಪೌಷ್ಟಿಕತೆಯಿಂದ ಕೂಡಿರಬೇಕು ಎಂದರು.
ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳ ಜೀವನಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಪೌರ ಕಾರ್ಮಿಕರು ಹಾಗೂ ಅವರುಗಳ ಅವಲಂಬಿತರು ಅರ್ಜಿ ಸಲ್ಲಿಸುವುದರೊಂದಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಡ್ರೆರರ್ಸ್, ಲೋರರ್ಸ್ ಗಳಿಗೆ ಪ್ರತೀ ಮಾಹೆ ವೇತನವನ್ನು ಕಾಲಕಾಲಕ್ಕೆ ಪಾವತಿಸಬೇಕು ಎಂದ ಅವರು, ಮ್ಯಾನ್ಯುಯಲ್ ಸ್ಕಾವೆಂರ‍್ಸ್ ಹಾಗೂ ಪೌರ ಕಾರ್ಮಿಕರಿಗೆ ಆದ್ಯತೆಯ ಮೇಲೆ ಶೀಘ್ರವಾಗಿ ನಿವೇಶನ, ನಿವೇಶನ ಹೊಂದಿದವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಸಹಾಯಕ ಕಮಿಷನರ್ ಮಹೇಶ್ಚಂದ್ರ, ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ ಡಿ.ಟಿ. ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಾಡ್ಲೂರು, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.