ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಬಂದರಿನ ಸವಾಂಗಿಣ ಅಭಿವೃದ್ಧಿ ಹಾಗೂ ಕುಂಠಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ನಡೆಸುವ ಸಂಬಂಧ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲು ಗಂಗೊಳ್ಳಿ ಮೀನುಗಾರಿಕೆ ಬಂದರಿಗೆ ಸಂಬಂಧಪಟ್ಟ 26 ಮೀನುಗಾರಿಕೆ ಸಂಘಟನೆಗಳು ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಕಚೇರಿಯಲ್ಲಿ ಭಾನುವಾರ ಸಭೆ ನಡೆಸಿ ಚರ್ಚೆ ನಡೆಸಿದರು.
ತಡವಾಗಿ ಆಗುತ್ತಿರುವ ಬಂದರಿನ ವಿವಿಧ ಕಾಮಗಾರಿಗಳನ್ನು ಶೀಘ್ರವಾಗಿ ವ್ಯವಸ್ಥಿತವಾಗಿ ಪ್ರಾರಂಭವಾಗಲು ವಿವಿಧ ರೀತಿಯಲ್ಲಿ ಹೋರಾಟ ಮಾಡುವ ದೃಷ್ಠಿಯಿಂದ ಮೀನುಗಾರರ 26 ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸರ್ವ ಸಂಸ್ಥೆಗಳ ಒಕ್ಕೂಟವನ್ನು ರಚಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಗಂಗೊಳ್ಳಿ ಮೀನುಗಾರಿಕೆ ಬಂದರು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು, ಮೀನುಗಾರಿಕೆ ಚಟುವಟಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಬಡ ಮೀನುಗಾರ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇದೆ ಅಲ್ಲದೆ ಗಂಗೊಳ್ಳಿ ಜನರ ಬದುಕು ಮೂರಾಬಟ್ಟೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಸರ್ವಾಂಗೀಣ ಅಭಿವೃದ್ಧಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ, ಸಚಿವರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೇಲೆ ಒತ್ತಡ ಹೇರಲು, ಬಂದರು ಅಭಿವೃದ್ಧಿಗೆ ಹಾಗೂ ಕುಂಠುತ್ತಾ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುವ ಉದ್ದೇಶದಿಂದ ಹೋರಾಟ ನಡೆಸಲು ಮೀನುಗಾರಿಕೆ ಸಂಘಟನೆಗಳು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಗಂಗೊಳ್ಳಿ ಮೀನುಗಾರಿಕೆ ಬಂದರಿನ 26 ಮೀನುಗಾರಿಕೆ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರ ಮುಖಂಡರು, ಮೀನುಗಾರರು ಉಪಸ್ಥಿತರಿದ್ದರು.