ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾಭ್ಯಾಸ ಕೇವಲ ಪುಸ್ತಕ ಓದಿಗೆ ಮಾತ್ರ ಸೀಮಿತವಲ್ಲ. ವಿದ್ಯಾಭ್ಯಾಸ ನಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ಬೆಳೆಸುವಂತಿರಬೇಕು. ಜೀವನದಲ್ಲಿ ಕಲಿಕೆ ಎಂಬುದು ನಿರಂತರ. ಶಿಕ್ಷಣ ಪಡೆದಷ್ಟು ಉತ್ತಮ ಅವಕಾಶಗಳು ನಮಗೆ ದೊರೆತು ನಮ್ಮ ಜೀವನದ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಉದ್ಯೋಗ ಸಿಗಲಿಲ್ಲ ಎಂದು ಕೊರಗದೆ ಸ್ವ ಉದ್ಯೋಗದತ್ತ ಯುವ ಜನಾಂಗ ಮನಸ್ಸು ಮಾಡಬೇಕು. ಪಡೆದುಕೊಂಡ ವಿದ್ಯಾರ್ಥಿವೇತನವನ್ನು ಸದ್ವಿನಿಯೋಗ ಮಾಡಿಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನ ವಿತರಿಸಿ ಸಂಸ್ಥೆಗಳಿಗೆ ಸಹಕಾರ ನೀಡುವಂತಾಗಬೇಕು ಎಂದು ಕರ್ಣಾಟಕ ಬ್ಯಾಂಕಿನ ಉಡುಪಿ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಹೇಳಿದರು.
ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.
ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಎಂ. ರವೀಂದ್ರ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ವಿದ್ಯಾನಿಧಿ ಸದಸ್ಯರಾದ ಡಾ. ಕಾಶೀನಾಥ ಪೈ, ಜಿ. ಗೋವಿಂದ್ರಾಯ ಆಚಾರ್ಯ, ಜಿ. ವೆಂಕಟೇಶ ಶೆಣೈ, ವಾಮನ ಎಸ್.ಪೈ, ಎಂ. ನಾಗೇಂದ್ರ ಪೈ, ಎಂ. ಅನಂತ ಪೈ ಮೊದಲಾದವರು ಉಪಸ್ಥಿತರಿದ್ದರು. ಸುಮಾರು ೧.೪೪ ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.
ಪತ್ರಕರ್ತ ಬಿ. ರಾಘವೇಂದ್ರ ಪೈ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಸರಸ್ವತಿ ವಿದ್ಯಾನಿಧಿಯ ಮಾಜಿ ಅಧ್ಯಕ್ಷ ಎನ್. ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕೆ. ರಾಮನಾಥ ನಾಯಕ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿ ವಂದಿಸಿದರು.