ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಹಣ, ಅಂತಸ್ತಿನಿಂದ ದೇವರ ಸಾಕ್ಷಾತ್ಕಾರವಾಗುವುದಿಲ್ಲ. ನಿಷ್ಕಲ್ಮಶ ಭಕ್ತಿ, ಪ್ರಾರ್ಥನೆಯಿಂದ ದೇವರ ಸಾಕ್ಷಾತ್ಕಾರವಾಗಿ ನಮ್ಮ ಜೀವನದಲ್ಲಿ ಖುಷಿ, ಸಂತೋಷ ಹೆಚ್ಚಾಗುತ್ತದೆ. ದೇವರ ಮೇಲೆ ಶ್ರದ್ಧೆ, ನಂಬಿಕೆ ಇಟ್ಟುಕೊಂಡು ಮುನ್ನಡೆದರೆ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳು ದೂರವಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಪ್ರಸಿದ್ಧ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು.
ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-2024 ಅಂಗವಾಗಿ ಗಂಗೊಳ್ಳಿಯ ಸ. ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿ ಹೇಳುವ ಮತ್ತು ಅವರು ತಪ್ಪು ದಾರಿ ಹಿಡಿಯದಂತೆ ಎಚ್ಚರ ವಹಿಸುವ ಅಗತ್ಯತೆ ಇದೆ. ಸಮಾಜಕ್ಕಾಗಿ ಬದುಕುವ ಮಕ್ಕಳನ್ನಾಗಿ ರೂಪಿಸಿ ನಮ್ಮ ದೇಶ ಹಾಗೂ ಸಮಾಜದ ಬೆಳವಣಿಗೆ ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ. ನಮ್ಮ ಜೊತೆ ಇದ್ದುಕೊಂಡು ನಮ್ಮ ಸಮಾಜವನ್ನು ಹಾಳು ಮಾಡುತ್ತಿರುವ ದುಷ್ಟಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು, ಹಿಂದು ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸಮಾಜದ ಅವನತಿಗೆ ನಾವೆಲ್ಲರೂ ಕಾರಣರಾಗಬೇಕಾಗುತ್ತದೆ ಎಂದರು.
ಕುಂದಾಪುರದ ಶ್ರೀ ನಾರಾಯಣ ಗುರು ಮಹಿಳಾ ಸೊಸೈಟಿ ಅಧ್ಯಕ್ಷೆ ಗುಣರತ್ನ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕಾರ್ಕಳದ ಉದ್ಯಮಿ ಶ್ರದ್ಧಾ ಅನಂತರಾಮ ಭಟ್ ಮತ್ತು ಮೊನಿಷಾ ದೇವಾಡಿಗ ಗಂಗೊಳ್ಳಿ ಶುಭ ಹಾರೈಸಿದರು.
ಇದೇ ಸಂದರ್ಭ ದಿ. ಜಿ. ನಾರಾಯಣ ವಿಶ್ವನಾಥ ಆಚಾರ್ಯ ಇವರ ನೆನಪಿಗಾಗಿ ರೂಪಿಸಿದ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಹಾಯಧನ ವಿತರಿಸಲಾಯಿತು.
ಊರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ, ಕಾರ್ಯದರ್ಶಿ ಶ್ರೀಧರ ಎನ್. ಸಕ್ಲಾತಿ ಉಪಸ್ಥಿತರಿದ್ದರು.
ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಪ್ರೇಮಾ ಸಿ. ಪೂಜಾರಿ ಸ್ವಾಗತಿಸಿದರು. ಅಧ್ಯಕ್ಷೆ ಸವಿತಾ ಯು. ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ಎನ್. ಶೇಟ್, ಸ್ವಾತಿ ಮಡಿವಾಳ, ಸಖು ಉದಯ ಜಿ., ಜಯಂತಿ ಆರ್. ಖಾರ್ವಿ ಮತ್ತು ಅನುಸೂಯ ಶೇರುಗಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ವಂದಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ ಪೈಲ್ ನೇಮ್ : ೧೪ಜಿಎಎನ್೧ (ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-೨೦೨೪ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅಕ್ಷಯ ಗೋಖಲೆ ಉದ್ಘಾಟಿಸಿದರು)















