ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: 14 ವಯೋಮಾನದ ಬಾಲಕರ ಕಬಡ್ಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಬ್ರಕಟ್ಟೆ ತಂಡ ಹೋಬಳಿ, ತಾಲೂಕು ಜಿಲ್ಲೆಯಲ್ಲಿ ತನ್ನ ತಂಡದ ಬಲಿಷ್ಠತೆಯನ್ನು ಪ್ರಚುರ ಪಡಿಸುತ್ತಾ ದೊಡ್ಡ ಅಂತರದೊಂದಿಗೆ ಉಳಿದ ತಂಡಗಳನ್ನು ಮಣಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿತ್ತು. ಅ.15ರಿಂದ 17ರ ವರೆಗೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಂಡ ತೃತೀಯ ಸ್ಥಾನ ಪಡೆಯುವುದರೊಂದಿಗೆ ಶಾಲೆ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತದೆ.
ಕ್ರೀಡಾ ಸ್ಪೂರ್ತಿ, ಸಮರ್ಪಣ ಮನೋಭಾವ ಮತ್ತು ಕಠಿಣ ಪರಿಶ್ರಮದಿಂದ ದೈಹಿಕ ಶಿಕ್ಷಕರಾದ ಗಜೇಂದ್ರ ಶೆಟ್ಟಿ ಅವರ ಗರಡಿಯಲ್ಲಿ ತಯಾರಾದ ಕುಮಾರ ರೋಹಿತ್ ನಾಯಕತ್ವದ ತಂಡ ಪ್ರಥಮ ಪಂದ್ಯಾಟದಲ್ಲಿ ಮೈಸೂರಿನ ವಿರುದ್ಧ 40-08ರ ದೊಡ್ಡ ಅಂತರದಲ್ಲಿ ಜಯಶಾಲಿಯಾಗಿ ಸೆಮಿಫೈನಲ್ ಹಂತ ತಲುಪಿತ್ತು.
ಸೆಮಿಫೈನಲ್‌ನಲ್ಲಿ ಮಂಡ್ಯದ ವಿರುದ್ಧ ಕೇವಲ 08 ಅಂಕಗಳ ಅಂತರದಲ್ಲಿ ವಿರೋಚಿತ ಸೋಲನ್ನು ಅನುಭವಿಸಿತು. ಮೂರನೇ ಸ್ಥಾನಕ್ಕಾಗಿ ಹಾಸನ ತಂಡದ ವಿರುದ್ಧ ನಡೆದ ಪಂದ್ಯಾಟದಲ್ಲಿ 45-21ರ ಅಂತರದಲ್ಲಿ ಅಮೋಘ ಜಯಭೇರಿ ಬಾರಿಸಿ ತೃತೀಯ ಸ್ಥಾನದೊಂದಿಗೆ ಸಾಬ್ರಕಟ್ಟೆ ಶಾಲೆ ಹೆಸರನ್ನು ವಿಭಾಗ ಮಟ್ಟದಲ್ಲಿ ಬೆಳಗಿದೆ.
ತಂಡದ ಈ ಸಾಧನೆಯನ್ನು ಶಾಲೆ, ಇಲಾಖೆ, ಊರವರು, ಶ್ಲಾಘಿಸಿದ್ದಾರೆ.