ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಆಧುನಿಕ ಕಾಲದಲ್ಲಿ ಅನುಸರಿಸುವ ಆಹಾರ ಪದ್ಧತಿ ಹಾಗೂ ಕಲಬೆರಕೆಯ ಆಹಾರ ಸೇವನೆಯಿಂದ ಎದುರಿಸುತ್ತಿರುವ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ವೈದ್ಯ ಪದ್ಧತಿಯು ಸೂಕ್ತ ಪರಿಹಾರವಾಗಿದ್ದು, ಅದನ್ನು ಹೆಚ್ಚು ಬಳಸುವ ಮೂಲಕ ಇನ್ನಷ್ಟು ಪ್ರಚುರಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಅಂದು ನಗರದ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ನಡೆದ 9 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಯುರ್ವೇದವು ನಮ್ಮ ಪೂರ್ವಜರ ಆಶೀರ್ವಾದವಾಗಿದ್ದು, ಸಾಂಪ್ರದಾಯಿಕ ವೈದ್ಯ ಪದ್ಧತಿ ಆಯುರ್ವೇದವು ರೋಗ ತಡೆಗಟ್ಟುವಿಕೆ ಮತ್ತು ಅರೋಗ್ಯವನ್ನು ಉತ್ತೇಜಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ವ್ಯೆದ್ಯ ಪದ್ಧತಿ ಬಗ್ಗೆ ನಿರ್ಲಕ್ಷ್ಯ ತೋರದೆ ಅವುಗಳಿಂದ ದೊರಕುವ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಆಯುರ್ವೇದ ವೈದ್ಯಕೀಯ ಸೌಲಭ್ಯವಿದ್ದು, ಮನುಷ್ಯನ ಶರೀರದಲ್ಲಿರುವ ದೋಷಗಳನ್ನು ತಿಳಿಸಿಕೊಡುವ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಸಾರ್ವನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಮನುಷ್ಯ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆರೋಗ್ಯಕರ ಅಭ್ಯಾಸ ಹಾಗೂ ಆಹಾರ ಪದ್ಧತಿಗಳ ಕುರಿತು ಹಲವು ವರ್ಷಗಳ ಹಿಂದೆ ಆಯುರ್ವೇದವು ಸಮಗ್ರವಾಗಿ ತಿಳಿಸಿಕೊಟ್ಟಿದ್ದು, ಪ್ರತಿಯೊಬ್ಬರು ಅವುಗಳನ್ನು ಪಾಲಿಸುವ ಮೂಲಕ ಉತ್ತಮ ಅರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ ಸಚಿವಾಲಯದಿಂದ 2016 ರಿಂದ ಪ್ರತೀ ವರ್ಷ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷವೂ ಕೂಡ ಒಂದೊಂದು ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಪೂರ್ವಭಾವಿಯಾಗಿ ಅಕ್ಟೋಬರ್ 21 ರಿಂದ 25 ರ ವರೆಗೆ ನಾರೀ ಸಬಲೀಕರಣ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಅಧ್ಯಕ್ಷ ಡಾ. ನಾರಾಯಣ್ ಟಿ. ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುತ್ಪಾಡಿ ಎಸ್.ಡಿ.ಎಂ ಕಾಲೇಜು ಆಫ್ ಆಯುರ್ವೇದ ಕಾಲೇಜು ಮತ್ತು ಹಾಸ್ಪಿಟಲ್, ಉಪನ್ಯಾಸಕಿ ಡಾ. ಧನೇಶ್ವರಿ ಮಹಿಳಾ ಸಬಲೀಕರಣಕ್ಕಾಗಿ ನಾವಿನ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಜಿ.ಎ.ಎಮ್.ಒ.ಎ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ನಾಗರಾಜ್, ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಡಾ. ಜಿ.ಶಂಕರ್ ಕಾಲೇಜಿನ ವಿದ್ಯಾರ್ಥಿನಿಯರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಡಾ. ಹೇಮಲತಾ ಸ್ವಾಗತಿಸಿ, ಡಾ. ಸರ್ವೋತ್ತಮ ಶೆಟ್ಟಿ ನಿರೂಪಿಸಿ, ಹಿರಿಯ ವೈದ್ಯಾಧಿಕಾರಿ ಡಾ. ಶ್ಯಾಮರಾವ್ ವಂದಿಸಿದರು.