ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಪಘಾತಗಳ ನಡೆದಾಗ ಯಾರನ್ನೋ ಹೊಣೆಯಾಗಿಸುವ ಬದಲು ರಸ್ತೆ ಸಂಚಾರ ನಿಯಮಗಳನ್ನು ಅರಿತು ಅದನ್ನು ಕಡ್ಡಾಯವಾಗಿ ಪಾಲಿಸುವುದು ಮುಖ್ಯ. ಬೈಂದೂರು ವಲಯದಲ್ಲಿ 26,000 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದು ಅವರೆಲ್ಲರ ರಕ್ಷಣೆ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಹೇಳಿದರು.
ಅವರು ರೋಟರಿ ಕ್ಲಬ್ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವತಿಯಿಂದ ಕಂಬದಕೋಣೆ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಸೋಮವಾರ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಾಹನಗಳ ಚಾಲಕರು ಹಾಗೂ ಮುಖ್ಯಸ್ಥರಿಗೆ ಹಮ್ಮಿಕೊಂಡ ʼವಿದ್ಯಾರ್ಥಿ ಸುರಕ್ಷತಾ ತರಬೇತಿ ಕಾರ್ಯಾಗಾರʼ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ ಅವರು ಮಾತನಾಡಿ, ಸಂಚಾರಿ ಅಪಘಾತಗಳು ನಮ್ಮಿಂದಲೇ ನಿಯಂತ್ರಣ ಆಗಬೇಕು. ಸಾಮಾನ್ಯ ಸಂಚಾರಿ ನಿಯಮಗಳ ಅರಿವು ಅಗತ್ಯ. ಅವುಗಳನ್ನು ಪಾಲಿಸಿ ಅವಘಡ ಆಗದಂತೆ ಎಚ್ಚರ ವಹಿಸೋಣ. ಅಪಘಾತ ಆದ ಬಳಿಕದ ಪರಿಣಾಮಗಳು ಭಯಾನಕವಾಗಿರುತ್ತದೆ ಎಂದರು.
ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಂಬದಕೋಣೆ ಸರಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ ಶೆಣೈ ಉಪಸ್ಥಿತರಿದ್ದರು. ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ಎಸ್.ಕೆ. ಬಳಿಕ ಸಂಚಾರ ಸುರಕ್ಷತೆಯ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ರೋಟರಿ ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಸ್ವಾಗತಿಸಿ, ಸಿ.ಆರ್.ಪಿ. ಮಂಜುನಾಥ ದೇವಾಡಿಗ ವಂದಿಸಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಸಹಕರಿಸಿದರು. ಬೈಂದೂರು ವಲಯದ ವಿವಿಧ ಶಾಲೆಗಳ ಮುಖ್ಯಸ್ಥರು, ಶಾಲಾ ವಾಹನಗಳ ಚಾಲಕ – ಮಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.