ಕುಂದಾಪುರ: ಡಿ.ಎನ್.ಎ. ರಕ್ತ ಪರೀಕ್ಷೆಯು ಜೀವನಾಂಶ ಪ್ರಕರಣವೊಂದರಲ್ಲಿ ಪುರುಷನಿಗೆ ಪ್ರಯೋಜನಕಾರಿಯಾದ ಪ್ರಕರಣವು ಕುಂದಾಪುರ ನ್ಯಾಯಾಲಯದಲ್ಲಿ ನಡೆದಿದೆ.
ಹಳ್ಳಿಹೊಳೆ ಗ್ರಾಮದ ಸುರೇಶ ಅಸಾಹಯಕ ಪರಿಸ್ಥಿತಿಯಲ್ಲಿದ್ದ ತನ್ನ ಮೇಲೆ ಅತ್ಯಾಚಾರಮಾಡಿ ಗರ್ಭಿಣಿಯನ್ನಾಗಿಸಿದ್ದಾನೆಂದು ಯುವತಿಯೋರ್ವಳು ಆರೋಪಿಸಿದ್ದಳು. ಅನಂತರ ಆತನಿಂದ ತಾನು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಲಾಲನೆ , ಪೋಷಣೆ, ವಿದ್ಯಾಭ್ಯಾಸದ ಬಗ್ಗೆ ಮಾಸಿಕ ಜೀವನಾಂಶ ಅರ್ಜಿಯನ್ನು ದಾಖಲಿಸಿದ್ದಳು.
ನ್ಯಾಯಾಲಯಕ್ಕೆ ಹಾಜರಾದ ಸುರೇಶ್ ಯುವತಿಯನ್ನು ತಾನು ಅತ್ಯಾಚಾರ ಮಾಡಿಲ್ಲವೆಂದು ಹಾಗೂ ಆಕೆಯ ಮಗುವಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದನು. ನ್ಯಾಯಾಲಯದ ಆದೇಶದಂತೆ ಸುರೇಶ ಯುವತಿ ಹಾಗೂ ಚಿಕ್ಕ ಮಗುವಿನ ರಕ್ತವನ್ನು ಬಹಿರಂಗ ನ್ಯಾಯಾಲಯದಲ್ಲಿ ಸಂಗ್ರಹಿಸಿ ಡಿ.ಎನ್.ಎ. ಪರೀಕ್ಷೆಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ವೈಜ್ಞಾನಿಕ ಅಧಿಕಾರಿ ಅಧಿಕಾರಿ ಎಲ್.ಪುರುಷೋತ್ತಮ ಅವರು ವಿವರವಾದ ರಕ್ತ ಪರೀಕ್ಷೆ ಮಾಡಿ ಮಗುವಿನ ತಂದೆ ಸುರೇಶ ಅಲ್ಲವೆಂದು ತಜ್ಞ ವರದಿಯನ್ನು ಕಳುಹಿಸಿದ್ದರು. ಪ್ರತಿಕೂಲ ವರದಿ ಬಂದ ಹಿನ್ನಲೆಯಲ್ಲಿ ಯುವತಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ನ್ಯಾಯಾಲಯ ಆಕೆ ಸಲ್ಲಿಸಿದ ಜೀವನಾಂಶ ಅರ್ಜಿಯನ್ನು ವಜಾ ಮಾಡಿದೆ.
ಡಿ.ಎನ್.ಎ ವರದಿಯು ಅತ್ಯಾಚಾರಿಗಳನ್ನು ಹಾಗೂ ಪಿತೃತ್ವ ಪರೀಕ್ಷೆಗಳಲ್ಲಿ ಮಗುವಿನ ತಂದೆಯನ್ನು ಪತ್ತೆ ಹಚ್ಚಿ ಯುವತಿಗೆ ನ್ಯಾಯ ದೊರಕಿಸಲು ನೆರವಾಗುವಂತೆ , ಸುಳ್ಳು ಆರೋಪವನ್ನು ಎದುರಿಸುವ ಯುವಕರಿಗೆ ಕೂಡಾ ನೆರವಾಗುತ್ತದೆ ಎಂದು ಈ ಕುತೂಹಲಕಾರಿ ಪ್ರಕರಣದಿಂದ ಸಾಬೀತಾಗಿದೆ. ಸುರೇಶ ಪರವಾಗಿ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.