ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಆಧುನಿಕ ನಲಂದಾ ವಿಶ್ವವಿದ್ಯಾಲಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಬಣ್ಣಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾನೂನು ಕಾಲೇಜಿನ ’ಕಾನೂನು ಕಾರ್ಯಕ್ರಮ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಆವರಣ ಕಂಡಾಗ ನಲಂದಾ ವಿಶ್ವವಿದ್ಯಾಲಯದ ನೆನಪು ಅನುರಣಿಸಿತು. ಆಳ್ವಾಸ್ ನಲ್ಲಿ ನಡೆಸುವ ಪ್ರತಿ ಕಾರ್ಯಕ್ರಮ ಅಭೂತಪೂರ್ವ, ಅದ್ವಿತೀಯ ಎಂದು ಶ್ಲಾಘಿಸಿದರು.
ದೀಪಾವಳಿ ಸನಿಹದಲ್ಲಿ ಸಂಕ್ರಾಂತಿ ಬಂದ ಹಾಗೆ, ಈ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶವನ್ನು ನೀಡಿದ್ದಾರೆ. ಇದು ನನ್ನ ಬದುಕಿನ ಅನನ್ಯ ಅವಕಾಶ, ಆನಂದ ಭರಿತ ಸಂಭ್ರಮ ಎಂದರು.
ಕಾನೂನು ಕಾಲೇಜು ಸ್ಥಾಪನೆಯಿಂದ ಕಾನೂನು ಜ್ಯೋತಿ ಬೆಳಗಲಿ, ಸರ್ವರಿಗೂ ಕೀರ್ತಿ ತರಲಿ. ಎಲ್ಲರಿಗೂ ಭರವಸೆ ಮತ್ತು ಅವಕಾಶ ಹೆಚ್ಚಿದೆ ಎಂದರು.
ಯಶಸ್ಸು ಆಕಸ್ಮಿಕ ಅಲ್ಲ. ಅಧ್ಯಯನ, ಶ್ರದ್ಧೆ, ತಪಸ್ಸಿನ ಕಾಯಕದ ಫಲಶ್ರುತಿ. ಗುರಿ ಸಾಧಿಸಲು ಏಕಾಗ್ರತೆ ಮುಖ್ಯ ಎಂದರು.
ಭಾರತ ಸಂಸ್ಕೃತಿ- ನಾಗರಿಕತೆ ತೊಟ್ಟಿಲು. ನಾವು ಶ್ರೇಷ್ಟತಯ ಕಡೆ ಗುರಿ ಇಡಬೇಕು ಎಂದರು.
ವಕೀಲರ ಬತ್ತಳಿಕೆಯಲ್ಲಿ ಬಹುವೈವಿಧ್ಯ ಬಾಣಗಳು ಇರಬೇಕು ಎಂದ ಅವರು ದೇಶದಲ್ಲಿರುವ 26 ರಾಷ್ಟ್ರೀಯ ಕಾನೂನು ಕಾಲೇಜುಗಳಿವೆ. ಆಳ್ವಾಸ್ ಕಾನೂನು ಕಾಲೇಜನ್ನು ಜಗತ್ತು ನೋಡುವಂತಾಗಬೇಕು ಎಂದರು.
ಕಾನೂನಿನಲ್ಲೂ ಕಲಿಕೆಗೆ ಹಲವಾರು ಅವಕಾಶಗಳಿವೆ. ಪಠ್ಯೇತರ ಚಟುವಟಿಕೆಗಳು, ಅತ್ಯುತ್ತಮ ಗ್ರಂಥಾಲಯ ರೂಪಿಸಿ ಎಂದರು.
ಕುಬೇರನ ಕಣಜಕ್ಕೆ ಕೈ ಹಾಕುವ ಸಾಮರ್ಥ್ಯ ಕಾನೂನು ಕಲಿಕೆಗೆ ಇದೆ. ಕಾನೂನು ಮೂಲಕ ದೇಶದ ಜನರ ಬದುಕನ್ನೇ ಬದಲಾಯಿಸಬಹುದು ಎಂದರು.
ಸಂಧಾನ, ವಾಣಿಜ್ಯ, ತಂತ್ರಜ್ಞಾನ, ತೆರಿಗೆ ಸೇರಿದಂತೆ ಎಲ್ಲೆಡೆ ಕಾನೂನು ತಜ್ಞರ ಬೇಡಿಕೆ ಇದೆ. ಕಾನೂನು ವಿಶಾಲ ಶರಧಿ. ಅಲ್ಲಿ ಈಜಿ ಜಯಿಸುವುದು ನಿಮ್ಮ ಅಧ್ಯಯನದ ಮೇಲಿದೆ ಎಂದರು.
ಕಾನೂನಿಗೆ ಚೌಕಟ್ಟು ಇಲ್ಲ. ಅದಕ್ಕೆ ನೀವು ಅಧ್ಯಯನ ಶೀಲರಾಗಬೇಕು. ಇದು ಬಿಟ್ಟಲ್ಲಿ ತುಂಬುವ ಪ್ರಶ್ನೆಗೆ ಉತ್ತರಿಸುವ ಪರೀಕ್ಷೆ ಅಲ್ಲ. ಬದುಕಿನ ಧ್ಯಾನ ಎಂದರು.
ಪ್ರಜಾಸತ್ತಾತ್ಮಕ ದೇಶದಲ್ಲಿ ನ್ಯಾಯ ಮತ್ತು ನ್ಯಾಯಾಲಯದ ರಕ್ಷಣೆ ನಮ್ಮ ಆದ್ಯ ಬದ್ಧತೆಯಾಗಬೇಕು. ನಮ್ಮದು ಜಾತ್ಯತೀತ ಹಾಗೂ ಉದಾರ ವ್ಯವಸ್ಥೆ. ಇಲ್ಲಿ ಧರ್ಮ ಮತ್ತು ನ್ಯಾಯಾಲಯ ವ್ಯವಸ್ಥೆ ಪ್ರತ್ಯೇಕವಾಗಿದೆ ಎಂದರು.
ವೇದಗಳು ಜಾತ್ಯಾತೀತ ದಾಖಲೆಗಳು. ಆದರೆ ಅದನ್ನು ಕಲಿಯಲು ಬಿಡಲೇ ಇಲ್ಲ. ನ್ಯಾಯದ ಕಲಿಕೆ ಶ್ರೇಷ್ಟ ಅವಕಾಶ ಎಂದರು.
ನಿರ್ವಿವಾದ ನ್ಯಾಯದಾನ ನಮ್ಮ ದೇಶದ ಅಭ್ಯುದಯಕ್ಕೆ ಪ್ರೇರಣೆ. ಸತ್ಯ ಮತ್ತು ಪ್ರಾಮಾಣಿಕತೆ ನ್ಯಾಯದಾನದ ಯಶಸ್ಸಿನ ಮೂಲ ಎಂದರು.
ರಾಜಾಧಿರಾಜ ಚೋಳರ ನ್ಯಾಯದಾನದ ಮಾದರಿ ಎಂದು ವಿವರಿಸಿದರು.
ಅಸಮಾನತೆ, ಶೋಷಣೆ ನಿವಾರಣೆಗೆ ನ್ಯಾಯ ಬೇಕು. ಅದರ ರಾಯಭಾರಿಗಳಾಗಿ, ಸಾಧಕರಾಗಿ ಎಂದು ಹಾರೈಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇರ ನೇಮಕಾತಿ ಆಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಮಾತನಾಡಿ, ಆಳ್ವಾಸ್ ಕಾನೂನು ಕಾಲೇಜಿನ ಕಟ್ಟಡಕ್ಕೆ ಎಂ. ವೀರಪ್ಪ ಮೊಯಿಲಿ ಹೆಸರು ಇಡಲಾಗುವುದು ಎಂದರು.
ರಾಜ್ಯದಲ್ಲಿ 127 ಕಾನೂನು ಕಾಲೇಜುಗಳಿವೆ. ನಮ್ಮ ಕಾಲೇಜಿನಲ್ಲಿ ಎಲ್ಲಾ ಪೂರಕ ಘಟಕಗಳನ್ನು ಸ್ಥಾಪಿಸಿ, ಶಿಸ್ತು ಮತ್ತು ಶೈಕ್ಷಣಿಕ ಶ್ರೇ?ತೆ ಸಾಧಿಸಲಾಗುವುದು. ಮಾದರಿ ಕಾಲೇಜು ನಿರ್ಮಿಸುವ ಶ್ರಮ ನಮ್ಮದು ಎಂದರು.
ನ್ಯಾಯವೇ ದೇಶದ ಅಡಿಪಾಯ. ಧರ್ಮ ಗ್ರಂಥಗಳೂ ನ್ಯಾಯದ ಆಶಯ ಹೊಂದಿದೆ. ಜೀವನ ಮೌಲ್ಯ ನ್ಯಾಯಪರವಾಗಿರಬೇಕು ಎಂದರು.
ವಕೀಲರು ತಪ್ಪು ಮಾಡಿದರೆ ಸಮಾಜ ನಷ್ಟಕ್ಕೆ ಈಡಾಗುತ್ತದೆ. ಈ ಎಚ್ಚರ ಇರಬೇಕು. ನ್ಯಾಯದ ಆಧಾರದಲ್ಲಿ ಸಾಮಾಜಿಕ ಬದುಕು ನಿಂತಿದೆ ಎಂದರು.
ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪ್ರಮುಖರು ಕಾನೂನು ಶಿಕ್ಷಣ ಪಡೆದವರು. ಇದು ನಮಗೆ ಹೆಮ್ಮೆ ಎಂದರು.
ದೇಶದಲ್ಲಿ 20ಲಕ್ಷಕ್ಕೂ ಅಧಿಕ ನೋಂದಾಯಿತ ವಕೀಲರಿದ್ದು, ಪ್ರತಿವರ್ಷ 70 ಸಾವಿರಕ್ಕೂ ಹೆಚ್ಚು ಮಂದಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಕಾನೂನಿನ ಜ್ಞಾನ ಎಲ್ಲರಿಗೂ ಅವಶ್ಯ.ಕಾನೂನು ಮತ್ತು ನ್ಯಾಯದ ಅಂತರ ಹೆಚ್ಚಾಗಬಾರದು ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗ ಸಿಇಟಿ ಪರಿಚಯಿಸಿದ ಪರಿಣಾಮ ಇಂದು ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಬೇಡಿಕೆ ಬಂದಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜನ್ನು ಆಳ್ವಾಸ್ ಸ್ಥಾಪಿಸಲಿ. ಮೂಡುಬಿದಿರೆ ಕೀರ್ತಿ ಉತ್ತುಂಗಕ್ಕೆ ಏರಿಸಿದ ಆಳ್ವರಿಗೆ ಕೃತಜ್ಞತೆಗಳು ಎಂದರು
ಬೆಂಗಳೂರು ವಕೀಲರ ಸಂಘದ ದರ್ಶನ್, ಮೂಡುಬಿದಿರೆ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಹುಬಲಿ ಪ್ರಸಾದ್, ಅಧ್ಯಕ್ಷ ಹರೀಶ್ ಪಿ., ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೋ.ಮಹಾಂತೇಶ್ ಪಿ.ಎಸ್., ಆಡಳಿತ ಮಂಡಳಿ ಸದಸ್ಯೆ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಇದ್ದರು.
ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಮಹಾಂತೇಶ್ ಪಿ.ಎಸ್., ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಮಮತಾ ಆರ್. ವಂದಿಸಿದರು.