ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಅದ್ಭುತವಾದ ಭಾಷೆ. ಈ ಭಾಷೆಗೆ ಶಕ್ತಿ ಸಂಭ್ರಮ, ಸೊಗಡು ಇದೆ. ಕುಂದಾಪ್ರದ ಕನ್ನಡ ಪ್ರಪಂಚದಾದ್ಯಂತ ಅದರದ್ದೇ ಆದ ಕೀರ್ತಿ ಗೌರವ ಸಂಭ್ರಮವಿದೆ. ದೇಶದಲ್ಲಿ ಕರ್ನಾಟಕ ರಾಜ್ಯದ ೮ ಜನ ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಇಡೀ ಕರ್ನಾಟಕಕ್ಕೆ ಗರಿ. ಕುಂದಾಪುರದ ರಾಜಬೀದಿಯಲ್ಲಿ ಕನ್ನಡದ ಕಂಪನ್ನು, ಕಲರವನ್ನು ಪಸರಿಸಿದ ಕಲಾಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇವರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕುಂದಾಪುರದಲ್ಲಿ ಕನ್ನಡ ಹಬ್ಬ ರಾಜ್ಯೋತ್ಸವ ಸಪ್ತಾಹದ ಅಂಗವಾಗಿ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಗುರುವಾರ ಜರಗಿದ ಕನ್ನಡ ರಥೋತ್ಸವ ಪುರ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶುಭಾಶಂಸನೆ ಮಾಡಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕುಂದಾಪುರದ ಚರಿತ್ರೆಯಲ್ಲಿ ಗುರುತಿಸಲ್ಪಟ್ಟ ಕಾರ್ಯಕ್ರಮ. ಕನ್ನಡ ನಮ್ಮ ಭಾಷೆ, ನಮ್ಮ ಹುಟ್ಟಿಗೆ ಕಾರಣವಾದ ಕನ್ನಡ ಭಾಷೆಯನ್ನು ಮಹತ್ವವನ್ನು ಪ್ರಚುರಪಡಿಸುವುದರೊಂದಿಗೆ ಅದನ್ನು ಇನ್ನಷ್ಟು ಪರಿಶುದ್ಧವಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡ ಭಾಷೆಯ ಬಗ್ಗೆ ಬಹಳ ತಾತ್ಸಾರ ಮಾಡುತ್ತಿದ್ದು, ನಮ್ಮವರೇ ನಮ್ಮ ಕನ್ನಡವನ್ನು ದೂರುವ ಕೆಲಸ ಮಾಡುತ್ತಿದ್ದಾರೆ. ಸುಮಾರು ೨೫೦೦ ವರ್ಷ ಹಿಂದಿನ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಎಷ್ಟೇ ಭಾಷೆ ಕಲಿತರೂ ನಮ್ಮ ಮಾತೃ ಭಾಷೆಯ ನೆನಪಿರಬೇಕು. ಈಗಿನ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿಲ್ಲ. ಸರಕಾರ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ ಕೋಟಿಗಟ್ಟಲೆ ಹಣವನ್ನು ವ್ಯರ್ಥ ಖರ್ಚು ಮಾಡಲಾಗುತ್ತಿದೆ. ನಮ್ಮ ಜನರನ್ನು ಜಾಗೃತಿಗೊಳಿಸುವ ಮತ್ತು ನಮ್ಮ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರದ ಕ್ರಮ ತೀರಾ ಸಪ್ಪೆಯಾಗಿದೆ. ಎಲ್ಲಾ ಸರಕಾರಗಳು ಕನ್ನಡದ ಬಗ್ಗೆ ಹೆಚ್ಚು ನಿಗಾ ವಹಿಸದಿರುವುದು ನಮ್ಮ ದುರ್ದೈವ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾದರೆ ಎಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ ಎಂದು ಹೇಳಿದರು.
ಶಾಸಕರಾದ ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಸುರೇಶ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಪ್ರಮೋದ ಮಧ್ವರಾಜ್, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜಿ., ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಉಮೇಶ ಪುತ್ರನ್, ಕುಂದಾಪುರ ಹೋಲಿ ರೋಜರಿ ಚರ್ಚಿನ ಧರ್ಮಗುರು ರೆ.ಫಾ. ಪೌಲ್ ರೇಗೋ, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಉದಯಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್, ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನಕರ ಶೆಟ್ಟಿ ಮತ್ತು ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ ಕಾವೇರಿ ವಂದಿಸಿದರು.
ಕುಂದಾಪುರ ಭಂಡಾರ್‌ಕರ‍್ಸ್ ಕಾಲೇಜಿನ ಎನ್.ಸಿ.ಸಿ. ಮತ್ತು ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು, ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ರಾಜಸ್ಥಾನಿ ವ್ಯಾಪಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ, ವಿವಿಧ ಜಾತಿ ಧರ್ಮದ ಮುಖಂಡರು, ವಿವಿಧ ಭಜನಾ ತಂಡಗಳು, ಸ್ವಸಹಾಯ ಸಂಘಗಳ ಸದಸ್ಯರು ಪುರಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭುವನೇಶ್ವರಿ ರಥ, ಎತ್ತಿನ ಗಾಡಿ, ಸಾಗರದ ಡೊಳ್ಳು ಕುಣಿತ, ದಫ್ ಕುಣಿತ, ಚಂಡೆ ವಾದನ, ಡೋಲು ಕುಣಿತ, ಭತ್ತ ಕುಟ್ಟುವ ಹಾಡು, ವಾದ್ಯ ತಂಡಗಳು ಪುರ ಮೆರವಣಿಗೆಯ ಸೊಬಗು ಹೆಚ್ಚಿಸಿತು.