ಕುಂದಾಪ್ರ ಡಾಟ್ ಕಾಮ ಸುದ್ದಿ.
ಬೈಂದೂರು: ಕಲೆ, ಸಾಹಿತ್ಯ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿನ ಶ್ರೀಮಂತಿಕೆಯನ್ನು ಹೊಂದಿರುವ ಬೈಂದೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಆಯೋಜಿಸಿರುವ ಬೈಂದೂರು ಉತ್ಸವ ಊರಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವ – ಸಂಭ್ರಮದ ಗೆಜ್ಜೆ, ಸಮೃದ್ಧಿ ಹೆಜ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕರಾವಳಿ ಹಾಗೂ ಮಲೆನಾಡು ಪ್ರದೇಶವನ್ನೊಳಗೊಂಡಿರುವ ಬೈಂದೂರಿಗೆ ಸಂಪರ್ಕ ಕಲ್ಪಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಕಳೆದ 10 ವರ್ಷದೀಚೆಗೆ ಅಭಿವೃದ್ಧಿಪಡಿಸುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೈಂದೂರನ್ನು ಪ್ರಮುಖ ಪ್ರವಾಸಿ ತಾಣವಾಗಿ ಹಾಗೂ ಆರಾಧನಾ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು ಬೈಂದೂರು ಉತ್ಸವಕ್ಕೆ ರಾಜ್ಯ ಸರಕಾರ ಕೂಡ ಅನುದಾನ ಬಿಡುಗಡೆ ಮಾಡಿ ಪ್ರೋತ್ಸಾಹಿಸಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬೈಂದೂರು ಅಭಿವೃದ್ಧಿಯ ಬಗ್ಗೆ ಕನಸು ಕಂಡ ಹಲವು ಮನಸ್ಸುಗಳಿವೆ. ಜನರ ಮನಸ್ಸು ಭಾವನೆಗಳನ್ನು ಉತ್ಸವದ ಮೂಲಕ ಒಂದಾಗಿಸಿ ಊರಿನ ಪ್ರಗತಿಯ ಬಗ್ಗೆ ಯೋಜಿಸುವ ಕಾರ್ಯವಾಗಿದೆ. ರಾಜ್ಯೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಬೈಂದೂರಿನಲ್ಲಿ ಅದ್ಧೂರಿ ಉತ್ಸವ ಸಂಘಟಿಸುವ ಮೂಲಕ ಅರ್ಕ್ಲ್ ಹೂಡುವ ಕೆಲಸವಾಗಿದೆ. ನಾಲ್ಕೈದು ಬಾರಿ ಬೈಂದೂರಿನಲ್ಲಿ ಉತ್ಸವ ಆದ ಬಳಿಕ ಇದಕ್ಕೊಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ಉದ್ಯಮಿ ನಿತಿನ್ ನಾರಾಯಣ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ ಶೆಟ್ಟಿ, ಕುಂದಾಪುರ ಉಪವಿಭಾಗಾಕಾರಿ ಮಹೇಶ್ಚಂದ್ರ, ಬೈಂದೂರು ತಹಶೀಲ್ದಾರ ಪ್ರದೀಪ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಕಾರಿ ಭಾರತಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಕಾರಿ ಅಜಯ್ ಭಂಡಾರರ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಲಯ ಅರಣ್ಯಾಕಾರಿ ಸಂದೇಶ್, ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮಾರ ಶೆಟ್ಟಿ, ಕೃಷ್ಣಪ್ರಸಾದ ಅಡ್ಯಂತಾಯ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಕುಂದಾಪುರ ತಾಲೂಕು ಆರೋಗ್ಯಾಕಾರಿ ಡಾ. ಪ್ರೇಮಾನಂದ, ರಾಜೇಶ್ ಕಾವೇರಿ, ಸದಾನಂದ ಉಪ್ಪಿನಕುದ್ರು, ಉತ್ಸವದ ಸಹಸಂಚಾಲಕ ಶ್ರೀಗಣೇಶ್ ಉಪ್ಪುಂದ, ಕರಣ್ ಪೂಜಾರಿ, ಪುಷ್ಪರಾಜ ಶೆಟ್ಟಿ, ಸುರೇಶ ಬಟ್ವಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ತಲ್ಲೂರಿನಿಂದ ಬೈಂದೂರು ತನಕ ಬೃಹತ್ ಟ್ಯಾಬ್ಲೋ ಹಾಗೂ ನಾನಾ ಭಜನಾ ತಂಡಗಳಿಂದ ಮೆರವಣೆಗೆ ನಡೆಯಿತು,.ಕರಾವಳಿ ಸಂಸ್ಕೃತಿ ಸಾರುವ ಆಕರ್ಷಕ ಟ್ಯಾಬ್ಲೋಗಳು ಸಾರ್ವಜನಿಕರ ಗಮನ ಸೆಳೆಯಿತು. ಬಳಿಕ ವಿಜ್ಞಾನ, ಕೃಷಿ, ತೋಟಗಾರಿಕೆ, ಆಹಾರ, ಕರಕುಶಲ, ಸಾಹಿತ್ಯ, ಮೀನುಗಾರಿಕೆ ಸೇರಿದಂತೆ ಹಲವು ಮೇಳಗಳು ಉದ್ಘಾಟನೆಗೊಂಡವು.
ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಬೈಂದೂರು ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಸ್ವಾಗತಿಸಿ, ಅರುಣಕುಮಾರ ಶಿರೂರು, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.