ಕುಂದಾಪುರ: ಜ್ಞಾನ, ಕೌಶಲ್ಯ ಮತ್ತು ಮನೋಬಲ ವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಪೂರಕ ಪರಿಸರವನ್ನು ನಿರ್ಮಾಣ ಮಾಡಿ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಉದ್ಯೋಗ ಪಡೆಯವ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯದ ಜೊತೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ರ್ತ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಹೇಳಿದರು.
ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜು ಹಾಗೂ ಇಲ್ಲಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಆರ್ಥಿಕಾಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ’ ವಿಷಯದ ಕುರಿತು ವೃತ್ತಿಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿದ್ಯಾರ್ಥಿಗಳ ಮನೋಬಲವನ್ನು ಕುಂಟಿತಗೊಳಿಸುತ್ತದೆಯೇ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್,ಕೆಎಎಸ್ ಮತ್ತಿತರ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ದೇಶದ ಅಭಿವೃದ್ಧಿಗೆ ತೊಡಕಾಗುವ ಭ್ರಷ್ಟಾಚಾರ ಸಮಸ್ಯೆಯನ್ನು ತೊಡೆದು ಹಾಕಲು ಸಾದ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಕಂಟ್ರಾಕ್ಟರ್ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಯೋಜಕತ್ವ ವಹಿಸಿದರು ನಂತರ ಅವರು ಮಾತನಾಡಿ,ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಸಕರಾತ್ಮಕ ಚಿಂತನೆಯೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದರು. ಹೆಮ್ಮಾಡಿ ಜನತಾ ಪ್ರೌಢ ಶಾಲಾ ಹಿರಿಯ ಶಿಕ್ಷಕ ಅಶೋಕ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಚಂದನ್ ಕಾರ್ಯಕ್ರಮ ಸಂಯೋಜಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ ವಂದಿಸಿದರು.