ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭೌತಿಕ, ಆದ್ಯಾತ್ಮಿಕವಾಗಿ ವಿಶೇಷ ಪರಿಣಾಮ ಬೀರುವ ಜತೆಗೆ ಸಾಮಾಜಿಕ ಸಾಮರಸ್ಯ, ನಮ್ಮ ಸಂಸ್ಕೃತಿ ಬಿಂಬಿಸುವ ಯಕ್ಷಗಾನದ ಪುರಾಣ ಕತೆಗಳ ಮೂಲಕ ಈಗಿನ ಯುವ ಪೀಳಿಗೆ ಧಾರ್ಮಿಕ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದ ಸಾರ್ಥಕತೆ ಪಡೆಯಬೇಕಾಗಿದೆ ಎಂದು ಉದ್ಯಮಿ ಬೆಳ್ವೆ ಗಣೇಶ ಕಿಣಿ ಹೇಳಿದರು.
ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಖ್ಯಾತ ಸ್ತ್ರೀ ವೇಷಧಾರಿ ರಾಮ ನಾರಿ ಸ್ಮರಣ ವೇದಿಕೆಯಲ್ಲಿ ಕಿರಿಮಂಜೇಶ್ವರ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ 9ನೇ ವರ್ಷದ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹ ಹಾಗೂ ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣೆಯ ಕಲಾತಪಸ್ವಿ 2024ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿ. ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ಎಂಟು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದರು.
ಹಾಸ್ಯ ಕಲಾವಿದ ಮೂರೂರು ರಮೇಶ ಭಂಡಾರಿ ಖ್ಯಾತ ಸ್ತ್ರೀ ವೇಷಧಾರಿ ದಿ. ರಾಮ ನಾರಿ ಇವರ ವ್ಯಕ್ತಿತ್ವ ಹಾಗೂ ಇವರೊಂದಿಗಿನ ದೀರ್ಘಕಾಲದ ವೃತ್ತಿ ಜೀವನದ ಒಡನಾಟಗಳನ್ನು ಸ್ಮರಿಸಿದರು.
ಕಿರಿಮಂಜೇಶ್ವರ ಶ್ರೀ ಅಗಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಐತಾಳ್ ಅಧ್ಯಕ್ಷತೆವಹಿಸಿದ್ದರು. ತಾಳಮದ್ದಲೆ ಅರ್ಥಧಾರಿ ಉಜಿರೆ ಅಶೋಕ ಭಟ್, ಟಿ. ಸುನಂದಾ ಆನಂದರಾಯ ಶ್ಯಾನುಭಾಗ್ ನಾಗೂರು ಇದ್ದರು.
ಕಾರ್ತಿಕ್ ಧಾರೇಶ್ವರ್ ಸ್ವಾಗತಿಸಿ, ಗೋವಿಂದ ಎಂ. ಕಾರ್ಯಕ್ರಮ ನಿರ್ವಹಿಸಿದರು. ಜಿ. ರಾಘವೇಂದ್ರ ಮಯ್ಯ ಹಾಲಾಡಿ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಮಂದಾರ್ತಿ ಇವರ ಹಿಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ಮುರೂರು ರಮೇಶ ಭಂಡಾರಿ, ಸಂಕದಗುಂಡಿ ಗಣಪತಿ ಭಟ್, ಹರೀಶ ಬೊಳಂತಿಮೊಗರು, ಮೂಡುಬಗೆ ಸತೀಶ ಶೆಟ್ಟಿ ಇವರಿಂದ ಕೃಷ್ಣಾರ್ಜುನ ತಾಳಮದ್ದಲೆ ಜರುಗಿತು.