ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವೃತ್ತಿ ಬದುಕಿನ ಜಂಜಾಟದ ನಡುವೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತಾಗ ಸದಸ್ಯರಿಗೆ ಸ್ಪೂರ್ತಿ, ಪರಸ್ಪರ ಪರಿಚಯ, ಹೊಸ ಸದಸ್ಯರ ಪಾಲ್ಗೊಳ್ಳುವಿಕೆ ಹೆಚ್ಚುವ ಜೊತೆಗೆ ಸಮಾಜಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ದೊರೆಯುತ್ತದೆ ಎಂದು ವಲಯ 1ರ ಮಾಜಿ ಸಹಾಯಕ ಗವರ್ನರ್ ಎಚ್. ಗಣೇಶ್ ಕಾಮತ್ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ ಆತಿಥ್ಯದಲ್ಲಿ ತಾಲೂಕಿನ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೊಡ್ಮನೆ ನಂದ ಪೂಜಾರಿ ರಂಗಮಂಟಪದಲ್ಲಿ ಭಾನುವಾರ ಆಯೋಜಿಸಲಾದ ರೋಟರಿ ವಲಯ – 1ರ ವಲಯ ಮಟ್ಟದ ಸಾಂಸ್ಕೃತಿಕ ಉತ್ಸವ – 2024 ಗಂಗಾತರಂಗ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸ್ಪರ್ಧೆಯಲ್ಲಿ ಒಬ್ಬರು ಮಾತ್ರ ಗೆಲ್ಲವು ಸಾಧ್ಯ ಎಂಬುದನ್ನು ಪಾಲ್ಗೊಳ್ಳುವವರು ಅರಿತುಕೊಂಡರೆ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಿಂದ ರೋಟರಿ ಮತ್ತಷ್ಟು ಚೈತನ್ಯಪೂರ್ಣವಾಗುತ್ತದೆ ಎಂದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಲಾ ತಾಂಡೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ಡಾ. ಬಿ. ರಾಜೇಂದ್ರ ಶೆಟ್ಟಿ, ಲರ್ನಿಂಗ್ ಫೆಸಿಲಿಟೇಟರ್ ಡಾ. ಉಮೇಶ್ ಪುತ್ರನ್ ವಲಯ 1ರ ಸಾಂಸ್ಕೃತಿಕ ಸಂಯೋಜಕ ಶಶಿಧರ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ವಲಯ ಸೇನಾನಿಗಳಾದ ಪ್ರದೀಪ್ ಡಿ.ಕೆ, ವೆಂಕಟೇಶ್ ನಾವುಂದ ಉಪಸ್ಥಿತರಿದ್ದರು.
ಗಂಗಾತರಂಗ ಅಧ್ಯಕ್ಷ ಉಮೇಶ್ ಎಲ್. ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಂಗೊಳ್ಳಿ ರೋಟರಿ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್ ಸ್ವಾಗತಿಸಿ, ಕಾರ್ಯದರ್ಶಿ ಮಾಲಾಶ್ರೀ ವಂದಿಸಿದರು. ರಾಮನಾಥ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.















