ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಉತ್ಸವ ನ. 11ರಿಂದ 18ರವರೆಗೆ ನಡೆಯಲಿದೆ. ನ.12ರಂದು ನಡೆಯುವ ಅದ್ಧೂರಿಯ ಮನ್ಮಹಾ ರಥೋತ್ಸವ ಅಂಗವಾಗಿ ಅದರ ಪೂರ್ವಬಾವಿ ಸಭೆ, ಶಾಸಕ ಗುರುರಾಜ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ದೇವಳದ ಸಭಾಂಗಣದಲ್ಲಿ ನಡೆಯಿತು.
ಉಪ್ಪುಂದ ದೇವಳದ ಮನ್ಮಹಾ ರಥೋತ್ಸವ ತಾಲೂಕಿನ ಅತೀ ದೊಡ್ಡ ರಥೋತ್ಸವವಾಗಿದ್ದು, ಸುಮಾರು 35 ವರ್ಷಗಳ ಬಳಿಕ ಇಲ್ಲಿನ ದೇವಳದ ರಥೋತ್ಸವ ಕೋಟೇಶ್ವರ ಹಬ್ಬಕ್ಕಿಂತ ಮೊದಲು ಬಂದಿರುವುದರಿಂದ ಜಾತ್ರಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತದೆ ಆದ್ದರಿಂದ ಜನರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮೆಸ್ಕಾಂ, ಅಗ್ನಿ ಶಾಮಕ ಇಲಾಖೆ, ಆರೋಗ್ಯ ಇಲಾಖೆಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕು, ಅಲ್ಲದೇ ಮುಂದಿನ ಶುಕ್ರವಾರದಿಂದ ಪ್ರತಿ ಶುಕ್ರವಾರ ಅನ್ನದಾನ ಸೇವೆ ಮಾಡಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಸೂಚಿಸಿದರು.
ರಥ ಬೀದಿ ಅಗಲೀಕರಣಗೊಳಿಸಿ:
ಇಲ್ಲಿನ ದೇವಳದ ರಥೋತ್ಸವದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ನೂಕು ನುಗ್ಗಲು ಉಂಟಾಗುತ್ತಿದೆ, ಹೀಗಾಗಿ ದೇವಳದ ರಥಬೀದಿ ಅಗಲೀಕರಣಗೊಳಿಸಿ ಎಂದು ಮೀನುಗಾರ ಮುಖಂಡ ವೆಂಕಟ್ರಮಣ ಖಾರ್ವಿ ಮನವಿ ಮಾಡಿದರು, ಇದಕ್ಕೆ ಸ್ಪಂಧಿಸಿದ ಶಾಸಕರು ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ ಶೆಟ್ಟಿ ಈ ಬಗ್ಗೆ ಪ್ರತ್ಯೇಕ ಸಭೆ ಕರೆದು, ಸ್ಥಳೀಯ ನಿವಾಸಿಗಳ ಮನವೊಲಿಸಿ, ರಥಬೀದಿ ಅಗಲೀಕರಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ ಶೆಟ್ಟಿ ಪ್ರಸ್ತಾವಿಸಿ, ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪರಿಗಣಿಸಿ ಅಮ್ಮನವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಇದಕ್ಕೆ ಎಲ್ಲರ ಸಹಕಾರ ನೀಡಬೇಕು ರಾ. ಹೆದ್ದಾರಿ. ಬೀದಿ ದೀಪ, ಗಿಡಗಂಟಿಗಳ ತೆರವಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ದೇವಸ್ಥಾನದ ಅಷ್ಟಬಂಧ ಸಮಿತಿಯ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ , ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ, ಉಪಾಧ್ಯಕ್ಷೆ ಮಹಾಲಕ್ಷ್ಮೀ, ದೇವಸ್ಥಾನದ ಆಡಳಿತ ಮಡಳಿಯ ಸದಸ್ಯರಾದ, ನಾರಾಯಣ ಖಾರ್ವಿ, ಪ್ರಕಾಶ ಉಡುಪ, ರಾಮ ಎಸ್., ಲಲಿತಾ ಶೆಟ್ಟಿ, ಅಂಬಿಕಾ, ರಾಜೇಶ ದೇವಾಡಿಗ, ರವೀಂದ್ರ ಪ್ರಭು, ಜನಾರ್ದನ ಮಾಚ ಪೂಜಾರಿ, ದೇವಳದ ಪ್ರಭಾರ ಕಾರ್ಯನಿರ್ವಹಣಾಕಾರಿ ಸುದರ್ಶನ ಎಸ್., ಬಂದೂರು ತಹಶೀಲ್ದಾರ ಪ್ರದೀಪ್, ವೃತ್ತ ನಿರೀಕ್ಷಕ ಸವಿತ್ರತೇಜ್, ಠಾಣಾಕಾರಿ ತಿಮ್ಮೇಶ, ಬಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ದೇವಸ್ಥಾನದ ಮಾಜಿ ಧರ್ಮದರ್ಶಿ ಜಯರಾಮ ಶೆಟ್ಟಿ, ನಾನಾ ಇಲಾಖೆಯ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಸಂದೇಶ ಭಟ್ ಉಪ್ಪುಂದ ಸ್ವಾಗತಿಸಿ, ನಿರೂಪಿಸಿದರು. ಗಣೇಶ ದೇವಾಡಿಗ ವಂದಿಸಿದರು.