ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ “ವಿವಿಧತೆಯಲ್ಲಿ ಏಕತೆ”ಯ ಪರಿಕಲ್ಪನೆಯ ಆವಿರ್ಭವ – 2024 ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತವಾಗ್ಮಿ, ನಿರೂಪಕರಾದ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಮಾತನಾಡಿ, ಶಿಕ್ಷಣದ ಉದ್ದೇಶ ಸಂಸ್ಕಾರವನ್ನು ಗಳಿಸುವುದು ಮಾತಾ ಪಿತೃಗಳು ಹಾಗೂ ಕಲಿಸಿದ ಗುರುಗಳ ಮೇಲೆ, ವಿದ್ಯೆ ಕಲಿತ ಸಂಸ್ಥೆಯ ಮೇಲೆ ಸದಾ ಗೌರವ ಇರಿಸಿಕೊಳ್ಳಬೇಕು. ವಿದ್ಯಾರ್ಥಿಗಳೆಲ್ಲರೂ ಭವ್ಯ ಭಾರತದ ಸತ್ಪ್ರಜೆಗಳಾಗಿ ಬಾಳಬೇಕು. ಕಷ್ಟಪಟ್ಟು ಕಲಿತಾಗ ಅದಕ್ಕೆ ತಕ್ಕ ಫಲ ಸಿಗುತ್ತದೆ. ಆದ್ದರಿಂದ ಎಲ್ಲರೂ ವಿದ್ಯಾ ವಿನಯ ಸಂಪನ್ನ ರಾಗಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಮಿಲಾಗ್ರೀಸ್ ಚರ್ಚ್ನ ಧರ್ಮಗುರುಗಳಾದ ಫಾದರ್ ಫರ್ಡಿನಾಂಡ್ ಗೋನ್ಸಾಲ್ವೀಸ್ ಅವರು ಮಾತನಾಡುತ್ತಾ ಕಲಿಕೆಗೆ ಪೂರಕವಾದ ವಾತಾವರಣವಿರುವಾಗ ನಾವು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತಿ ಮುಖ್ಯವಾದದ್ದು ಆದ್ದರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ತಾಳ್ಮೆ ಶಿಸ್ತಿನಿಂದ ಯಶಸ್ಸು ಪಡೆಯುವಂತಾಗಲಿ. ಬದ್ಧತೆಯಿಂದ ಕಾರ್ಯ ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ತ್ರಿಶಾ ಫೌಂಡೇಶನ್ನ ಅಧ್ಯಕ್ಷರಾದ ಪ್ರಭಾಕರ್ ಭಂಡಾರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಕನಸುಗಳನ್ನು ನನಸು ಮಾಡಲು ಅವಿರತ ಶ್ರಮ ಇರಬೇಕು ಸ್ಪರ್ಧಾತ್ಮಕ ಯುಗದಲ್ಲಿ ನಾವು ಮುಂಚೂಣಿಯಲ್ಲಿ ರಬೇಕಾದರೆ ನಿರಂತರ ತರಬೇತಿ ಅವಶ್ಯಕ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಅಮೋಘ ಪ್ರಯತ್ನ ಮತ್ತು ಸಾಧನೆ ಆಗಲಿ ಎಂದು ಆಶಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ವಿಶೇಷತೆ, ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವಿಕೆ ಮತ್ತು ವ್ಯವಸ್ಥೆಗಳ ಕುರಿತು ತಿಳಿಸಿ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಹಗಲಿರಳೂ ಶ್ರಮಿಸುತ್ತಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕಳೆದ ವರ್ಷ ನಡೆದ ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದು ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ನಡೆಯಿತು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್. ಎಲ್., ಆದರ್ಶ್ ಎಂ.ಕೆ ಉಪಸ್ಥಿತರಿದ್ದರು.
ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತ್ರಿಶಾ ಫೌಂಡೇಶನ್ ಕಾರ್ಯದರ್ಶಿ ಸರಿತಾ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ವಾರ್ಷಿಕ ವರದಿ ವಾಚಿಸಿದರು. ಹಿಂದಿ ಭಾಷಾ ಉಪನ್ಯಾಸಕ ಸುಧಾಕರ್ ಐಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಜೋಯಲ್ ಫೆರ್ನಾಂಡಿಸ್ ವಂದನಾರ್ಪಣೆಗೈದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ್ ಕಾರ್ಯಕ್ರಮ ನಿರೂಪಿಸಿದರು.