ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕುಂಭಾಸಿಯ ಮಕ್ಕಳ ಮನೆಯಲ್ಲಿ ಕೊರಗ ಸಮುದಾಯದ ಸಂಸ್ಕೃತಿ ಹಾಗೂ ಸಂಪ್ರಾದಾಯ ಬೆಳಕಿನ ಹಬ್ಬ ದೀಪಾವಳಿ ಬೊಲ್ಪು ಎನ್ನುವ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಅನಾವರಣಗೊಂಡಿತು.
ಆದಿವಾಸಿಗಳಾದ ಕೊರಗ ಸಮುದಾಯ ಕಾಡಿನ ಜೊತೆಗಿನ ನಂಟು, ಕರಾವಳಿಯ ಬದುಕಿನ ಜೊತೆ ಹಾಸುಹೊಕ್ಕಾದ ಅವರ ನಡೆ ನುಡಿ ಆಚಾರ ವಿಚಾರ ಪರಿಶುದ್ಧ ಸಂಪ್ರಾದಾಯಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರದಲ್ಲಿ ಕೊರಗ ಸಮುದಾಯದ ಯುವ ಪೀಳಿಗೆಗೆ ಸಮುದಾಯದ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳಕು ಚೆಲ್ಲುವ ಮೂಲಕ ಹಿರಿಯರು ಈ ಹಿಂದೆ ನಡೆಸಿದ ಜೀವನದ ಪದ್ಧತಿ ಹಾಗೂ ದೈವಗಳ ಆರಾಧನೆ ಮತ್ತು ಅವರ ಕಟ್ಟಿಕೊಂಡ ಕಾನನದೊಳಗಿನ ಮಾನವೀಯ ಮೌಲ್ಯಗಳ ಪ್ರಕೃತಿಕ ಸಂಬಂಧಗಳು ಮತ್ತು ಬದುಕಿನ ಬುತ್ತಿಗೆ ದಾರಿ ತೋರಿಸಿದ ಪರಿಕರಗಳನ್ನು ತಯಾರಿಸುವ ಅವರ ಕರಕುಶಲ ಕಲೆಗಳ ವೈಶಿಷ್ಟ್ಯವನ್ನು ಪೂಜಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ಹಿಂದಿನ ಕಾಲದಲ್ಲಿ ಕೊರಗ ಸಮುದಾಯ ಕೃಷಿ ಕುಟುಂಬವಾಗಿಲ್ಲವಾದರೂ ಕೂಡ ಕೃಷಿ ಬೆಳೆದ ಸಂದರ್ಭದಲ್ಲಿ ಹಾಗೂ ಭತ್ತ ಕಟಾವು ಮಾಡಿದ ಬಳಿಕ ಸಮುದಾಯ ಪ್ರಕೃತಿಗೆ ಪೂಜೆ ಸಲ್ಲಿಸುವ ವಿಧಾನವಿತ್ತು. ಆ ಸಂದರ್ಭ ಕೃಷಿಕರು ಭತ್ತ ಕಟಾವು ಮಾಡುವ ವೇಳೆ ಹಾಗೂ ಭತ್ತ ಸಾಗಿಸುವ ವೇಳೆ ದಾರಿಯಲ್ಲಿ ಬಿದ್ದ ಭತ್ತವನ್ನು ಹೆಕ್ಕಿ ತಂದು ಬಿಸಿಲಿನಲ್ಲಿ ಒಣಗಿಸಿ ತಿಂಡಿಯನ್ನು ತಯಾರಿಸಿ ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸಿ ಮೊದಲಿಗೆ ಈ ತಿಂಡಿಯನ್ನೇ ಭೂಮಿ ತಾಯಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುವ ಮೂಲಕ ವಿಶೇಷವಾಗಿ ಪ್ರಕೃತಿ ಪೂಜಿಸಲಾಗುತ್ತಿತ್ತು. ಇದರಂತೆ ಇಲ್ಲಿಯೂ ತಮ್ಮ ಸಮುದಾಯದ ಪರಿಕರಗಳನ್ನು ಮೆರವಣಿಗೆಯ ಮೂಲಕ ತಂದು ಪ್ರಕೃತಿಯ ಮಡಿಲಿನಲ್ಲಿಟ್ಟು ಪೂಜೆ ಸಲ್ಲಿಸಿ ಸಮುದಾಯದ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಕ್ಕಳ ಮನೆ ಕುಂಭಾಸಿಯ ಮುಖ್ಯಸ್ಥರಾದ ಗಣೇಶ್ ವಿ. ಕುಂದಾಪುರ ಅವರು ಮಾತನಾಡಿ, ಆಧುನಿಕ ದೀಪಾವಳಿಯ ಸಂಭ್ರಮದ ನಡುವೆ ಕೊರಗ ಸಮುದಾಯದ ಸಂಪ್ರಾದಾಯಗಳು ಹಾಗೂ ಭಾಷೆಯೂ ಸಹ ಮುಂದಿನ ದಿನದಲ್ಲಿ ಉಳಿಯಬೇಕು ಎನ್ನುವ ಕಾರಣದಿಂದ ಕುಂಭಾಸಿ ಮಕ್ಕಳ ಮನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಮತ್ತು ಸಮುದಾಯದ ಜನರ ನಡುವೆ ವಿಶೇಷವಾಗಿ ಈ ದೀಪಾವಳಿಯ ಸಂದರ್ಭ ಈ ಬೋಲ್ಪು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ.
ಯಾವುದೇ ದೋಷಗಳು ನಮ್ಮವರಿಗೆ ಬರಬಾರದು. ಡೋಲು ನಮ್ಮ ರಕ್ಷಕನಾದ ಮಹದೇವ. ಮುಂದೇಯೂ ಕೂಡ ಅವನು ನಮ್ಮ ಜೊತೆಗೆ ಇರಬೇಕು. ಶ್ರಮಜೀವಿಗಳಾಗಿ ನಮ್ಮ ಬದುಕನ್ನು ರೂಪಿಸುವುದಕ್ಕೆ ಬುಟ್ಟಿ ನಮಗೆ ಜೀವನದ ದಾರಿ ತೋರಿಸಿದೆ. ನಮ್ಮ ಅವಿಭಾಜ್ಯ ಅಂಗವಾದ ಕತ್ತಿಯು ಕೂಡ ನಮ್ಮ ಬದುಕು ರೂಪಿಸಲು ಮುಖ್ಯವಾಗಿತ್ತು. ಪ್ರಸ್ತುತ ದಿನದಲ್ಲಿ ಅಕ್ಷರದ ಮೂಲಕ ವಿಭಿನ್ನ ಬದುಕನ್ನು ಕೊಡುತ್ತೀರುವ ಪುಸ್ತಕಗಳು ಕೂಡ ನಮ್ಮ ದೇವರು ಎನ್ನುವ ನಂಬಿಕೆಯೊಂದಿಗೆ ಸಮಾಜದ ಪ್ರತಿಯೊಬ್ಬರಿಗೂ ಒಳಿತನ್ನು ಮಾಡಲಿ ಎನ್ನುವ ವಿಶೇಷ ಪ್ರಾರ್ಥನೆಯ ಮೂಲಕ ಮೊದಲಿಗೆ ಹುಭಾಶಿಕ ರಾಜ, ಕೊರಗ ತನಿಯ, ನಂದರಾಯನಿಗೆ ಪೂಜೆ ಸಲ್ಲಿಸಿಯೇ ನಮ್ಮ ದಿನಗಳು ಆರಂಭವಾಗುತ್ತದೆ ಎನ್ನುತ್ತಾರೆ ಕೊರಗ ಸಮುದಾಯದ ಗಣೇಶ್ ಬಾರ್‌ಕೂರು ಇವರು.
ಕಾನನದೊಳಗೆ ನಮ್ಮ ಹಿರಿಯರು ಕಟ್ಟಿಕೊಂಡ ಸಂಬಂಧವನ್ನು ಯುವ ಸಮೂಹಕ್ಕೆ ಪರಿಚಯಿಸುವ ಸಲುವಾಗಿ ಕಾಡಿನಿಂದ ತಂದ ಬೆತ್ತ, ಬಳ್ಳಿಯಿಂದ ತಯಾರಿಸಲಾದ ಅನ್ನ ಬಸಿಯುವ ತಟ್ಟಿ, ತಡಪೆ (ಮೊರ), ಕೊರಗಜ್ಜನ ಬುಟ್ಟಿ, ಜೀವನಕ್ಕೆ ಆಧಾರವಾದ ಕತ್ತಿ ಸೇರಿದಂತೆ ಡೋಲಿನಿಂದಲೇ ನಮ್ಮ ಹಿರಿಯರು ಶ್ರಮಜೀವಿಗಳಾಗಿ ಬದುಕು ಕಟ್ಟಿಕೊಂಡಿದ್ದರು ಎಂಬ ಕಾರಣಕ್ಕಾಗಿ ನಮ್ಮ ಜೀವಂತಿಕೆಯ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾಥರ್ಿಸುವ ಪರಿಯನ್ನು ಈ ಮಕ್ಕಳ ಮನೆಯಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಕೊರಗ ಸಮುದಾಯದ ಮುಖಂಡರಾದ ಶೇಖರ ಮರವಂತೆಯವರು.
ಹಿಂದಿನ ಕಾಲದಲ್ಲಿ ಡೋಲು ನಮಗೆ ಮನರಂಜನೆಯ ಪ್ರಮುಖ ಸಾಧನವಾಗಿತ್ತು. ಹಾಗೂ ಮದುವೆ ಸೇರಿದಂತೆ ಧಾಮರ್ಿಕ ಕೆಲಸಗಳಲ್ಲಿಯೂ ನಮ್ಮ ಡೋಲಿಗೆ ಪ್ರಮುಖವಾಗಿ ಮಹತ್ವವಿದೆ. ಕಾಡಿನಲ್ಲಿ ನಮ್ಮ ಜನರು ಇರುವಾಗ ಕಾಡು ಪ್ರಾಣಿಗಳನ್ನು ಓಡಿಸಲು ಸಹ ಡೋಲು ಒಂದು ಸಾಧನವಾಗಿತ್ತು. ನಮ್ಮ ಬದುಕಿನ ಪ್ರಮುಖ ಕೊಂಡಿಯೇ ಈ ಡೋಲು ಹಾಗಾಗಿ ಈ ಡೋಲುಗಳನ್ನು ಸಹ ನಮ್ಮ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ಡೋಲಿನ ಮಹಿಮೆಯನ್ನು ಸಾರಲಾಗಿದೆ ಎನ್ನುತ್ತಾರೆ ಕೊರಗ ಸಮುದಾಯದ ಮುಖಂಡರಾದ ಲಕ್ಷ್ಮಣ ಬೈಂದೂರು ಅವರು.
ದೊಂದಿ ಬೆಳಕಿನಲ್ಲಿಯೇ ವಿಶೇಷ ಭೋಜನ: ಹಿಂದೆ ಸಮುದಾಯದ ಜನರು ಹೊನ್ನೆಣ್ಣೆಯಲ್ಲಿ ದೀಪವನ್ನು ಬೆಳಗಿಸಿ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಈ ಒಂದು ಅನುಭವ ಇಂದಿನ ಮಕ್ಕಳಿಗೂ ಸಿಗಬೇಕು ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದ ಆಯೋಜಕರು ವಿಶೇಷವಾಗಿ ದೊಂದಿ ಬೆಳಕಿನಲ್ಲಿಯೇ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.