ಗಂಗೊಳ್ಳಿ: ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಖಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಸುಟ್ಟಗಾಯ ಮೊದಲಾದವುಗಳಿಗೆ ರಾಜ್ಯ ಸರಕಾರ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಉಡುಪಿ ಜಿಲ್ಲಾ ವ್ಯವಸ್ಥಾಪಕ ಸಚ್ಚಿದಾನಂದ ಹೇಳಿದರು.
ಅವರು ಮೇಲ್‌ಗಂಗೊಳ್ಳಿಯ ಅಂಬೇಡ್ಕರ್ ಭನದ ವಠಾರದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಬೆಂಗಳೂರು, ಆದರ್ಶ ಆಸ್ಪತ್ರೆ ಉಡುಪಿ ಇವರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ, ಅಮೃತಾ ಯುವತಿ ಮಂಡಲ ಹಾಗೂ ಅರ್ಚನಾ ಯುವತಿ ಮಂಡಲ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಶಾಲಾ ಮಕ್ಕಳಿಗೂ ರಾಜ್ಯ ಸರಕಾರ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಇದೀಗ ಮುಖ್ಯಮಂತ್ರಿ ಸಾಂತ್ವನ ಯೋಜನೆಯ ಮೂಲಕ ಇನ್ನಷ್ಟು ಸೌಲಭ್ಯ ನೀಡಲು ಸರಕಾರ ಮುಂದಾಗಿದೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಶಿಬಿರ ಉದ್ಘಾಟಿಸಿದರು. ಗಂಗೊಳ್ಳಿ ಗ್ರಾಪಂ ಸದಸ್ಯೆ ಚಂದು, ಗ್ರಾಪಂ ಮಾಜಿ ಸದಸ್ಯ, ಪತ್ರಕರ್ತ ಬಿ.ರಾಘವೇಂದ್ರ ಪೈ, ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ.ಶರೀಫ್, ಡಾ.ಬಸವರಾಜ್, ಯುವಕ ಮಂಡಲದ ಅಧ್ಯಕ್ಷ ನಾಗೇಶ ಮೊದಲಾದವರು ಉಪಸ್ಥಿತರಿದ್ದರು.
ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಭಾಸ್ಕರ ಎಚ್.ಜಿ. ಸ್ವಾಗತಿಸಿದರು. ಆರೋಗ್ಯ ಮಿತ್ರರಾದ ಸುಜನಮಾಲಾ ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ವಂದಿಸಿದರು.