ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಟ್ಟಿಅಂಗಡಿ ವಸತಿಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಸಂಪನ್ನಗೊಂಡಿತು.
14 ಮತ್ತು 17 ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಉದ್ದಜಿಗಿತ, ಗುಂಡೆಸೆತ, 100ಮೀ, 200ಮೀ, 400ಮೀ, 800ಮೀ, 1500ಮೀ ಓಟ ಮತ್ತು ರಿಲೇ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಹಟ್ಟಿಅಂಗಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಪ್ರತಾಪ್ ಶೆಟ್ಟಿ ಅವರು ಉದ್ಘಾಟನೆಗೈದು ವಿದ್ಯಾರ್ಥಿಗಳಿಗೆ ” ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯು ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುತ್ತಿರುವುದು ಇಡೀ ಊರಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವದಾಖಲೆಗಳು ಕೂಡ ಇಲ್ಲಿ ಸೃಷ್ಟಿಯಾಗುತ್ತಿವೆ ಎಂದರೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅವರ ತಂಡ ಮಕ್ಕಳ ಬೆಳವಣಿಗೆ ಮತ್ತು ಸಾಧನೆಗೆ ಅದೆಷ್ಟು ಮಹತ್ವವನ್ನು ನೀಡುತ್ತಾರೆಂಬುದಕ್ಕೆ ನೈಜ ಸಾಕ್ಷಿಯಾಗಿದೆ. ನಿತ್ಯದ ಪಾಠ ಪ್ರವಚನಗಳನ್ನು ತನ್ಮಯತೆಯಿಂದ ಕಲಿತು, ಆಟೋಟಗಳಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಪಾಲ್ಗೊಂಡರೆ ಭವಿಷ್ಯದಲ್ಲಿ ಯಶಸ್ವಿ ಜೀವನವನ್ನು ನಡೆಸಲು ಸುಲಭಸಾಧ್ಯವಾಗುತ್ತದೆ”. ಎಂದರು.
ತಲ್ಲೂರಿನ ಉದ್ಯಮಿಗಳಾದ ಗಣೇಶ್ ಪೂಜಾರಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳ ಪಾತ್ರ ಬಹಳ ಪ್ರಮುಖವಾದುದು. ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಸಾಧಿಸಲು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಶಿಕ್ಷಣಸಂಸ್ಥೆಗಳು ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡಾ ಚಟುವಟಿಕೆಗಳಿಗೂ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರು “ನಾವು ಹೆಚ್ಚು ಹೆಚ್ಚು ಆಸಕ್ತಿಯನ್ನು ತೋರಿಸಿದ್ದಷ್ಟು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪಕ್ವಗೊಳ್ಳುತ್ತೇವೆ, ಪರಿಣತಿಯನ್ನು ಸಾಧಿಸಿ, ಕೀರ್ತಿ ಪಡೆಯುತ್ತೇವೆ. ಅರ್ಧದಲ್ಲೇ ಹೋರಾಟವನ್ನು ಮೊಟಕುಗೊಳಿಸಿದರೆ ಆರಂಭದಿಂದ ಪಟ್ಟ ಪ್ರಯತ್ನ ವ್ಯರ್ಥಗೊಳ್ಳುತ್ತದೆ. ಹಾಗಾಗಿ ನಮ್ಮ ಪ್ರಯತ್ನ ನಿರಂತರವಾಗಿರಬೇಕೆಂದು”ಕರೆಕೊಟ್ಟರು.
ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಸದಾರಾಮ್ ವೇದಿಕೆಯಲ್ಲಿದ್ದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಹಾಗೂ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿ ಹುರಿದುಂಬಿಸಿದರು.
ವಿದ್ಯಾರ್ಥಿಗಳಾದ ಶ್ರದ್ಧಾ ಕಾರ್ಯಕ್ರಮ ನಿರೂಪಿಸಿ, ದಯಾಸಾಗರ್ ಸ್ವಾಗತಿಸಿದರೆ, ಸಂಕ್ಷಿತಾ ವಂದಿಸಿದರು.