ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಂಗಕಲೆಗಳನ್ನು ಪರಿಚಯಿಸುವ ಮತ್ತು ಕಲಾ ಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ತುಮರಿಯ ಕಿನ್ನರ ಮೇಳ ರಂಗತಂಡದವರಿಂದ ಇರುವೆ ಪುರಾಣ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.
ಇದು ‘ದಿ ಸ್ಟೋರಿ ಆಫ್ ಎ ಸ್ನೇಟ್ಸ್ ಹು ಡಿಸ್ಕವರ್ ದಿ ಇಂಪಾರೆನ್ಸ್ ಆಫ್ ಬೀಯಿಂಗ್ ಸ್ಟೋ’ ಎಂಬ ಕಥೆಯಿಂದ ಸ್ಫೂರ್ತಿ ಪಡೆದು ಕಟ್ಟಿದ ನಾಟಕವಾಗಿದ್ದು, ಪುಟ್ಟ ಇರುವೆಯೊಂದು ತನ್ನ ಅಸ್ತಿತ್ವದ ಕುರಿತು ಹುಟ್ಟುವ ಪ್ರಶ್ನೆಗಳಿಗೆ ತಮ್ಮವರಿಂದ ಸೂಕ್ತ ಉತ್ತರ ದೊರಕದಿದ್ದಾಗ, ತಾನೇ ಸ್ವತಃ ಉತ್ತರ ಕಂಡುಕೊಳ್ಳಲು ಪಯಣ ಆರಂಭಿಸುತ್ತದೆ. ಮಾರ್ಗದಲ್ಲಿ ಅದು ಗೂಬೆ, ಕಪ್ಪೆ, ಬೆಕ್ಕು, ಕಾಗೆ ಮುಂತಾದ ಪ್ರಾಣಿಗಳನ್ನು ಭೇಟಿಯಾಗಿ ಅಲ್ಪ ಸ್ವಲ್ಪ ಉತ್ತರ ಕಂಡುಕೊಳ್ಳುತ್ತದೆ. ಮುಂದುವರೆದು ಒಂದು ಪಟ್ಟಣವನ್ನು ತಲುಪಿ ಅಲ್ಲಿ ಮನುಷ್ಯರು ಎಸಗುತ್ತಿರುವ ಅನಾಹುತಗಳನ್ನು ಗಮನಿಸುತ್ತದೆ. ವಾಪಸು ತನ್ನ ಗೂಡಿಗೆ ಮರಳಿ ತಮಗೊದಗುತ್ತಿರುವ ಅಪಾಯವನ್ನು ತಿಳಿಸುತ್ತದೆ. ಪ್ರಾಣಿಗಳೆಲ್ಲವೂ ಬೇರೆ ಸ್ಥಳವನ್ನು ಹುಡುಕಿಕೊಂಡು ಹೊರಡುತ್ತವೆ. ಈ ಜಗತ್ತಿನಲ್ಲಿ ಪ್ರತಿಜೀವಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವನ್ನು ತಿಳಿಸುವ ಮಕ್ಕಳ ನಾಟಕವಿದಾಗಿದ್ದು, ವಿದ್ಯಾರ್ಥಿಗಳನ್ನು ರಂಜಿಸಿತು. ನಿಧಿ ಎಸ್. ಶಾಸ್ತ್ರಿ ಈ ನಾಟಕವನ್ನು ನಿರ್ದೇಶಿಸಿದ್ದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಶಶಿಕಲಾ ಶೆಟ್ಟಿ ಕಿನ್ನರಮೇಳದವರನ್ನು ಸ್ವಾಗತಿಸಿ, ವಂದಿಸಿದರು.