ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಕಂದಾಯ ಸಚಿವರು ಬಗರ್ ಹುಕುಂ (ಅಕ್ರಮ-ಸಕ್ರಮ) ಕಾನೂನಿನ ಅಡಿ ಈಗಾಗಲೇ ಅರ್ಜಿ ನಮೂನೆ 50 ಹಾಗೂ 53 ರ ಅಡಿ ಬಾಕಿ ಇರುವ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಬೇಕು ಹಾಗೂ ಹೊಸದಾಗಿ ಅರ್ಜಿ ನಮೂನೆ 57 ರ ಅಡಿ ಬಂದಿರುವ ಅರ್ಜಿಗಳನ್ನು ಸಮಿತಿಯು ಆದಷ್ಟು ಬೇಗ ವಿಚಾರಣೆ ನಡೆಸಿ ಅರ್ಜಿದಾರರರಿಗೆ ಹಕ್ಕು ಪತ್ರ ನೀಡಬೇಕು ಎಂದು ಹೇಳಿದ ಆದೇಶವನ್ನು ಮುಂದೆ ಇಟ್ಟುಕೊಂಡು ಉಡುಪಿ ಜಿಲ್ಲಾಡಳಿತ ಅರ್ಜಿ ನಮೂನೆ 57 ರ ಹೆಚ್ಚಿನ ಅರ್ಜಿಗಳನ್ನು ತಿರಸ್ಕಾರ ಮಾಡಲು ಹೊರಟಿರುವ ವಿಚಾರ ತಿಳಿದು ಬಂದಿರುತ್ತದೆ. ಇದು ಜಿಲ್ಲಾಡಳಿತ ರೈತ ವಿರೋಧಿ ಕ್ರಮವಾಗಿದೆ. ಕುಮ್ಕಿ ಹಕ್ಕು ಕೂಡ ಇದು ಬ್ರಿಟಿಷರ ಕಾಲದಿಂದಲೂ ರೈತ ಅನುಭವಿಸಿಕೊಂಡು ಬಂದ ಅವಕಾಶ. ರೈತನ ಕೃಷಿಗೆ ಅಗತ್ಯವಾದ ಸೊಪ್ಪು, ತರಗೆಲೆ ಇತ್ಯಾದಿ ಇತ್ಯಾದಿ ಪಡೆಯಲು ಕುಮ್ಕಿ ಭೂಮಿ ನೀಡಲಾಗಿದೆ. ಇವತ್ತು ಅದೆಷ್ಟೋ ದಶಕಗಳಿಂದ ರೈತ ಕುಮ್ಕಿ ಭೂಮಿಯಲ್ಲೂ ಕೃಷಿ ಮಾಡಿಕೊಂಡಿದ್ದಾನೆ, ಇವತ್ತು ಕುಮ್ಕಿ ಇತ್ಯಾದಿ ಸಬೂಬು ಹೇಳಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ರೈತರ ಅಕ್ರಮ-ಸಕ್ರಮದಡಿಯ ಅರ್ಜಿಗಳನ್ನು ತಿರಸ್ಕಾರ ಮಾಡಲು ಹೊರಟಿರುವುದು ರೈತ ವಿರೋಧಿ ಕ್ರಮವಾಗಿದೆ ಎಂದು ಎಂದು ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಅವರು ಹೇಳಿದ್ದಾರೆ.
ಇದರೊಂದಿಗೆ ಅರ್ಜಿಗಳನ್ನು ತಿರಸ್ಕಾರ ಮಾಡುವ ನೆಪದಲ್ಲಿ ರೈತರಿಗೆ ಅನಗತ್ಯ ಕಿರುಕುಳ ನೀಡುವ ವಿಚಾರ ಕೂಡ ಕೇಳಿ ಬರುತ್ತಿದೆ. ಇವತ್ತು ಸರ್ಕಾರಿ ಭೂಮಿ ಏನಾದರೂ ಕೃಷಿ ಭೂಮಿಯಾಗಿ ಉಳಿದಿದ್ದರೆ ಅದಕ್ಕೆ ಅತೀ ದೊಡ್ಡ ಕಾರಣ ರೈತ, ಇವತ್ತು ರೈತರಿಂದ ಅವರ ಕೃಷಿ ಭೂಮಿ ಕಸಿದುಕೊಂಡು ಅದನ್ನು ಬಂಡವಾಳ ಶಾಹಿಗಳಿಗೆ ನೀಡುವ ಹುನ್ನಾರ ಕೂಡ ಜಿಲ್ಲಾಡಳಿತ ಅಕ್ರಮ-ಸಕ್ರಮ ಅರ್ಜಿಗಳನ್ನು ತಿರಸ್ಕಾರ ಮಾಡುವ ಉದ್ದೇಶದ ಹಿಂದೆ ಇದೆ ಎನ್ನುವ ಅನುಮಾನ ಕೂಡ ರೈತರಲ್ಲಿ ಇದೆ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಅಕ್ರಮ-ಸಕ್ರಮದ ಅರ್ಜಿಗಳನ್ನು ಬೇರೆ ಬೇರೆ ಕಾರಣ ನೀಡಿ ತಿರಸ್ಕಾರ ಮಾಡಲು ಹೊರಟರೆ ಜಿಲ್ಲಾಡಳಿತ ವಿರುದ್ಧ ಜಿಲ್ಲೆಯ ರೈತರೆಲ್ಲರೂ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಹಾಗೂ ಈ ಬಗ್ಗೆ ಕಂದಾಯ ಸಚಿವರಿಗೆ ಕೂಡ ದೂರು ನೀಡಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.