ಕುಂದಾಪುರ: ಗ್ರಾಮೀಣ ಪ್ರದೇಶಗಳ ಜನರ ಹಿತ ಕಾಪಾಡಿಕೊಳ್ಳುವುದರೊಂದಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಹಳ್ಳಿ ಜನರಿಗೆ ಕೆನರಾ ಬ್ಯಾಂಕ್ ಉತ್ತಮ ಸೇವೆ ನೀಡಲು ಬದ್ಧವಾಗಿದೆ. ಬ್ಯಾಂಕ್ ಸ್ಥಾಪನೆಯ ಉದ್ದೇಶಗಳನ್ನು ಹಾಗೂ ಸಂಸ್ಥಾಪಕರ ಆಶಯಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮುನ್ನಡೆಯುತ್ತಿದೆ. ಬ್ಯಾಂಕಿನ ಎಲ್ಲಾ ಚಟುವಟಿಕೆಗಳಿಗೆ ಸ್ಫೂರ್ತಿಯಾಗಿರುವ ಅಮ್ಮೆಂಬಳ ಸುಬ್ಬರಾವ್ ಅವರ ದೂರದರ್ಶಿತ್ವವೇ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಾರ್ಯಾಲಯದ ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ ಹೇಳಿದರು.
ಅವರು ಗುರುವಾರ ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಆಶ್ರಯದಲ್ಲಿ ಜರಗಿದ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭ ಹಿರಿಯ ಗ್ರಾಹಕರಾದ ಮಾಧವ ನಾಯಕ್ ನೇರಳಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ಅರ್ಹ ಫಲಾನುಭವಿಗಳಿಗೆ ಸಾಲಪತ್ರ ವಿತರಿಸಲಾಯಿತು. ಬ್ಯಾಂಕಿನ ಎಜಿಎಂ ಐ.ಸಿ.ಶೆಟ್ಟಿ, ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ, ಉದ್ಯಮಿಗಳಾದ ಅಶೋಕಕುಮಾರ್ ಶೆಟ್ಟಿ, ಗೋಪಾಲ ಶೆಟ್ಟಿ, ನಾರಾಯಣ ನಾಯಕ್, ಬ್ಯಾಂಕಿನ ಗ್ರಾಹಕರು, ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಮುಖ್ಯ ಪ್ರಬಂಧಕ ಸತೀಶ ಬೀಡು ಸ್ವಾಗತಿಸಿದರು. ಆಫೀಸರ್ ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.