ಬೈಂದೂರು: ಇಂದಿನ ಸೋಲಿನ ಬಗ್ಗೆ ಆತ್ಮ ವಿಮರ್ಶೆ ಮಾಡಿ ಮುಂದಿನ ದಿನಗಳಲ್ಲಿ ಗೆಲುವಿಗಾಗಿ ಶ್ರಮಿಸಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಉಜ್ವಲಗೊಳಿಸಲು ಸರಿಯಾಗಿ ವಿವೇಚಿಸಿ ನ್ಯಾಯವಾದ ರಹದಾರಿಯಲ್ಲಿ ಧೈರ್ಯದಿಂದ ಮುಂದುವರಿದಾಗ ಸಾಧನೆಗೆ ಯಾವ ಅಡ್ಡಿಯೂ ಆಗಲಾರದು ಎಂದು ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.
ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರಿಯಿಲ್ಲದಿದ್ದರೆ. ಏನನ್ನೂ ಸಾಧಿಲಾಗದು. ಸುಸ್ಥಿರತೆ ನೆಮ್ಮದಿಯಿಂದ ನಮ್ಮ ಕರ್ತವ್ಯಗಳನ್ನು ಅರಿತು ಭೌತಿಕ ಮತ್ತು ಮಾನಸಿಕವಾಗಿ ಮೊದಲು ಸಧೃಡರಾಗಬೇಕು. ಪ್ರತಿಭೆಯ ಸಾಮರ್ಥ್ಯ ಪ್ರದರ್ಶಿಸಲು ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ. ಬಹುಮುಖ ಪ್ರತಿಭೆಗಳಿಗೆ ಇಲ್ಲಿ ಪೂರಕವಾದ ವ್ಯವಸ್ಥೆ ರೂಪಿಸಲಾಗಿದೆ. ಇದೂ ಕೂಡಾ ನಿಮಗೆ ಸಾಧನೆಯ ಒಂದು ಮೆಟ್ಟಿಲಾಗಿದ್ದು, ಸ್ವಂತ ಪರಿಶ್ರಮದಿಂದ ನಿಮ್ಮಲ್ಲಿರುವ ಪ್ರತಿಭೆಯನ್ನು ಅರಳಿಸಲು ಇಂತಹ ವೇದಿಕೆಗಳಲ್ಲಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದಿನ ಶೈಕ್ಷಣಿಕ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ ಹೆಗ್ಡೆ, ಮಹಾ ಮೇಧಾವಿಗಳು, ರಾಜಕೀಯ ಪುಢಾರಿಗಳು ಹವಾನಿಂತ್ರಿತ ಕೊಠಡಿಯಲ್ಲಿ ಕುಳಿತು ಮುಂದಿನ ಸ್ಥಿತಿ-ಗತಿಗಳನ್ನು ಅವಲೋಕಿಸದೇ ಜಾರಿ ಮಾಡಿದ ಕೆಲವು ಸರಕಾರದ ಯೋಜನೆಗಳಿಂದ ಗ್ರಾಮೀಣ ಭಾಗದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಗೊಂದಲ ಸೃಷ್ಠಿಯಾಗುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎಂದು ಅವರು ಪ್ರತಿಪಾದಿಸಿದರು.
ತಾಪಂ ಸದಸ್ಯ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಬಾರಿ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನಪಡೆದ ಶ್ರೇಯಸ್ ಶೆಟ್ಟಿಯವರಿಗೆ ಸಿಂಡಿಕೇಟ್ ಬ್ಯಾಂಕ್ ಪರವಾಗಿ ನಗದು ರೂ.೧೦ ಸಾವಿರ ಹಾಗೂ ಪ್ರಶಸ್ತಿಪತ್ರವನ್ನು ನಾಗೂರು ಸಿಂಡಿಕೇಟ್ ಬ್ಯಾಂಕ್ ಶಾಖೆಯ ಅಧಿಕಾರಿ ಪರಶುರಾಮ್ ಹಸ್ತಾಂತರಿಸಿದರು.
ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್. ಪ್ರಕಾಶ್ ರಾವ್, ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಶಿಕ್ಷಣ ಸಂಯೋಜಕರಾದ ವೆಂಕಪ್ಪ ಉಪ್ಪಾರ್, ನಿತ್ಯಾನಂದ ಶೆಟ್ಟಿ ಆಕಾಶವಾಣಿ ಕಲಾವಿದೆ ಪ್ರಮಿಳಾ ಕುಂದಾಪುರ ಉಪಸ್ಥಿತರಿದ್ದರು. ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸ್ವಾಗತಿಸಿ, ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ ವಂದಿಸಿದರು. ಶಿಕ್ಷಕರುಗಳಾದ ಶ್ರೀಕಾಂತ್ ಕಾಮತ್, ಅರವಿಂದ ಕೊಠಾರಿ, ತಿಮ್ಮಪ್ಪ ಗಾಣಿಗ ನಿರೂಪಿಸಿದರು.