ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ವಿದ್ಯಾರ್ಥಿಗಳ ಪ್ರತೀ ಹೆಜ್ಜೆಯಲ್ಲೂ ಗುರುವಿನ ಸ್ಥಾನ ಇರಬೇಕು ಎಂದು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾದ (ಐಸಿಎಸ್‌ಐ) ಕೇಂದ್ರ ಸಮಿತಿ ಸದಸ್ಯ ಸಿ. ಎಸ್. ದ್ವಾರಕಾನಂದ್ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ’ಶಿಕ್ಷಣ ತಜ್ಞರ ಸಶಕ್ತೀಕರಣ – ಶಿಕ್ಷಕರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ಇಷ್ಟಪಟ್ಟು ಓದಬೇಕು. ಕಷ್ಟ ಪಟ್ಟು ಓದುವ ಹಾಗೆ ಆಗಬಾರದು. ವಿದ್ಯಾರ್ಥಿಗಳಿಗೆ ಗುರಿ ಅತಿ ಮುಖ್ಯ. ಯಾವುದಕ್ಕಾಗಿ ಓದುತ್ತಿದ್ದೇವೆ ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ನಿಮ್ಮ ಸಮಯವನ್ನು ಓದಿಗೆ ಮೀಸಲಿಡಬೇಕು. ಇಷ್ಟ ಪಟ್ಟು ಕೆಲಸ ಮಾಡಿದಾಗ ಅದು ಕಷ್ಟ ವೆನಿಸುವುದಿಲ್ಲ’ ಎಂದರು.
ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರಜ್ವಲ್ ಆಚಾರ್ ಮಾತನಾಡಿ, ಶಿಕ್ಷಕರು ತುಂಬಾ ಸವಾಲುಗಳನ್ನು ಎದುರಿಸಬೇಕಾಗಿದೆ. ಶಿಕ್ಷಣ ನೀಡುವ ಜೊತೆಗೆ ತಂತ್ರಜ್ಞಾನಕ್ಕೆ ಸ್ಪಂದಿಸಬೇಕು. ನಾಳೆಯ ಸಮಾಜಕ್ಕೆ ನಾಯಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲೆ ಇದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಕೃತಜ್ಞರಾಗಿರಬೇಕು. ಮೊದಲು ನಿಮ್ಮ ಯೋಚನೆ ಬದಲಾಯಿಸಿಕೊಳ್ಳಿ. ಎಲ್ಲಾ ಶಿಕ್ಷಣ ಕ್ಷೇತ್ರಕ್ಕೂ ಅದರದೇ ಆದ ವಿಶೇಷತೆ ಇದೆ ಎಂದರು.
ಅರಿವು ಮೂಡಿಸುವ ಶಿಕ್ಷಕರೇ ವಿದ್ಯಾರ್ಥಿಗಳ ಭವಿಷ್ಯದ ನಿರ್ದೇಶಕರು. ವಿದ್ಯಾರ್ಥಿಗಳಲ್ಲಿ ಇರುವ ಸಾಮರ್ಥ್ಯವನ್ನು ಹುಡುಕಿ, ಎಚ್ಚರಿಸಿ ಎಲ್ಲಾ ಮನುಷ್ಯನಿಗೆ ಅವನದೇ ಆದ ಸಾಮರ್ಥ್ಯವಿದೆ ಎಂದರು.
ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಲು ಶಿಕ್ಷಕರಿಗೆ ಸಾಧ್ಯ. ಸಮಾಜದ ಜವಾಬ್ದಾರಿ ಶಿಕ್ಷಣದಲ್ಲಿದೆ. ಅದು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ತಿಳಿಸುತ್ತದೆ ವಿದ್ಯಾರ್ಥಿಗಳನ್ನು ಸಮಾಜನ ಶ್ರೇ? ವ್ಯಕ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದು ಎಂದರು.
ಪುಸ್ತಕದ ವಿಚಾರ ತಿಳಿಸುವುದು ಮಾತ್ರ ನಿಮ್ಮ ಕೆಲಸವಲ್ಲ ಬದುಕಿನ ಬಗ್ಗೆ ಎಚ್ಚರಿಸುವುದು ಶಿಕ್ಷಕರು. ವಿದ್ಯಾರ್ಥಿ ತಪ್ಪು ದಾರಿ ಹಿಡಿದರೆ ತಿದ್ದುವುದು ಶಿಕ್ಷಕರ ಕರ್ತವ್ಯ ಎಂದರು.
’ಶಿಕ್ಷಕರ ಸಂಪನ್ಮೂಲ ಉನ್ನತೀಕರಣ’ ಕುರಿತು ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮನೋಜ್ ಲೂಯಿಸ್ ಹಾಗೂ ’ಕಂಪೆನಿ ಸೆಕ್ರಟರೀಸ್‌ಯಾಗಿ ವೃತ್ತಿ ಜೀವನ ಮತ್ತು ಉದ್ಯೋಗ ಅವಕಾಶಗಳು’ ಕುರಿತು ಮಣಿಪಾಲ್ ಟೆಕ್ನಾಲಜಿಯ ಕಂಪೆನಿ ಸೆಕ್ರೆಟರಿ ಚಂದನಾ ಟಿಕೋಠಿ ಉಪನ್ಯಾಸ ನೀಡಿದರು. ಕಾರ‍್ಯಕ್ರಮದಲ್ಲಿ ಕಂಪೆನಿ ಸೆಕ್ರೆಟರಿಗಳಾದ ರಾಕೇಶ್ ನಾಯಕ್, ಸಂತೋಷ್ ಪ್ರಭು, ಸಿದ್ದೇಶ್ ಭಕ್ತ ಹಾಗೂ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆಜಿ ಇದ್ದರು.
ಸಹಾಯಕ ಪ್ರಾಧ್ಯಾಪಕಿ ಸಮನ್ ಸೈಯದ್ ಕಾರ್ಯಕ್ರಮ ನಿರೂಪಿಸಿದರು. ಅಪರ್ಣಾ ಕೆ. ಸ್ವಾಗತಿಸಿದರು. ಸುಪ್ರೀತಾ ನಾಯಕ್ ವಂದಿಸಿದರು.