ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಬಹುಮುಖ್ಯ, ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಮಯ ನಿರ್ವಹಣೆ, ಹಿನ್ನಡೆ ಮತ್ತು ಟೀಕೆಗಳನ್ನು ಎದುರಿಸಲು ತಾಳ್ಮೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಕುಂದಾಪುರ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಹಾಸ್ ಜೆ.ಜಿ. ಅತಿಥಿಗಳನ್ನು ಪರಿಚಯಿಸಿ, ಸತೀಶ್ ಶೆಟ್ಟಿ ಬಹುಮಾನ ವಿತರಣಾ ಪಟ್ಟಿ ವಾಚಿಸಿ, ಪೂಜಾ ವಂದಿಸಿದರು.
ದ್ವಿತೀಯ ಬಿ.ಕಾಂ. (ಇ) ವಿಭಾಗದ ಅನುಷಾ, ಪ್ರಥಮ ಬಿಸಿಎ (ಬಿ) ವಿಭಾಗದ ಪ್ರಜ್ವಲ್ ಶೆಟ್ಟಿ ವೈಯಕ್ತಿಕ ಚಾಂಪಿಯನ್‌ಗಳಾಗಿ, ದ್ವಿತೀಯ ಬಿ.ಕಾಂ. (ಇ) ವಿಭಾಗ ಪ್ರಥಮ, ತೃತೀಯ ಬಿ.ಕಾಂ. (ಸಿ) ಮತ್ತು ಪ್ರಥಮ ಬಿಸಿಎ (ಬಿ) ವಿಭಾಗ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ತರಗತಿವಾರು ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.
ಪೂರ್ವಾಹ್ನ ನಡೆದ ಪಥಸಂಚಲನದಲ್ಲಿ ಪಥಮ ಬಿ.ಕಾಂ. (ಬಿ) ಪ್ರಥಮ, ತೃತೀಯ ಬಿ.ಕಾಂ. (ಸಿ) ದ್ವಿತೀಯ, ದ್ವಿತೀಯ ಬಿ.ಕಾಂ. (ಬಿ) ತೃತೀಯ ಬಹುಮಾನ ಪಡೆದರು.