ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಫೂರ್ತಿ, ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದ ಪರಿಶ್ರಮ ಪಟ್ಟು ಆಡಿದಾಗ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಿಳಿಸಿದರು.
ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹಾಲಿಂಗ ನಾಯ್ಕ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾಸಂಸ್ಥೆಗಳ ಕ್ರೀಡಾಕೂಟದ ಸಂಘಟನೆ ಉತ್ತಮವಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಗುರಿ, ಪರಿಶ್ರಮ ಅಗತ್ಯವಾಗಿ ಬೇಕು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಂದ್ರ ಶೆಟ್ಟಿ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ನಿರಂತರವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಬಹುಮಾನ ಪಡೆದುಕೊಂಡರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸೋಲು ಗೆಲುವು ಮುಖ್ಯವಲ್ಲ, ಸೋತವರು ಪರಿಶ್ರಮಪಟ್ಟರೆ ಗೆಲುವು ಸಾಧ್ಯ ಎಂದರು.
ಈ ವೇಳೆ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ ಗದ್ದೆಮನೆ , ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ., ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ರವಿಶಂಕರ್ ಹೆಗ್ಡೆ ವೇದಿಕೆಯಲ್ಲಿದ್ದರು.
ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿದರು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.