ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಅನಿವಾರ್ಯತೆಯಿದೆ. ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣ ಅತ್ಯವಶ್ಯವಾಗಿದೆ. ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದ ಕಾಣುವಂತಾಗಬೇಕು ಎಂದು ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ ಹೇಳಿದರು.
ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್‌ನ ಸುವರ್ಣ ಸಂಭ್ರಮಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಗ್ನಿ ದಿವ್ಯದಲ್ಲಿ ಸ್ಪುಟಗೊಂಡು ಬಂಗಾರ ಮೆರುಗು ಪಡೆಯುವಂತೆ ಸಂಘರ್ಷದ ಕುಲುಮೆಯಲ್ಲಿ ಹದಗೊಂಡು ಲೋಕಕ್ಕೆ ಮಾದರಿಯಾಗ ಹೊರಟ ಸಮಾಜವಿದ್ದರೆ ಅದು ಗೌಡಸಾರಸ್ವತ ಸಮಾಜ. ಕಳೆದ 800ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದ ಇತಿಹಾಸದ, ಹಿರಿಯರು ಆಚರಿಸಿಕೊಂಡು ಬಂದಂತಹ ಆಚರಣೆ, ಸಂಪ್ರದಾಯಗಳ ಬಗ್ಗೆ ದಾಖಲೀಕರಣ ಮಾಡುವ ಅವಶ್ಯಕತೆಯಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ನಮ್ಮ ಸಮಿತಿಯ ಪೂರ್ವಾಧ್ಯಕ್ಷ ಕೆ. ಪುಂಡಲೀಕ ನಾಯಕ್ ಅವರು ಕೃತಿಯನ್ನು ರಚಿಸಲಿದ್ದಾರೆ ಎಂದರು.
ಪೂವಾಧ್ಯಕ್ಷರಾದ ಎನ್. ದಾಮೋದರ ಪ್ರಭು, ಕೆ. ಪುಂಡಲೀಕ ನಾಯಕ್, ಯು. ರಾಜೀವ ಭಟ್, ಕೆ. ರವೀಂದ್ರ ಕಿಣಿ, ಮಾಜಿ ಕಾರ್ಯದರ್ಶಿಗಳಾದ ಎನ್. ಸತೀಶ ವಾಮನ ಪೈ, ಎನ್. ರಮೇಶ ಪೈ ಇದ್ದರು.
ಹಾಲಿ ಕಾರ್ಯದರ್ಶಿ ಶ್ರೀಶ ಭಟ್ ಪ್ರಾಸ್ತಾವಿಸಿದರು. ವಿನಾಯಕ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಮುದಾಯದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಸಮಾಜವು ಒಗ್ಗಟ್ಟಿನಿಂದ ಸಂಘಟಿತವಾಗಬೇಕಾಗಿದೆ. ಈ ಸಂಘಟನೆ ಯಾರ ವಿರುದ್ದವೂ ಅಲ್ಲ. ಬದಲಾಗಿ ತಮ್ಮತನವನ್ನು ಉಳಿಸಿಕೊಂಡು ಪ್ರತಿಯೊಬ್ಬರೂ ಸ್ವಾಭಿಮಾನಿಯಾಗಿ ಬೆಳೆಯಬೇಕೆನ್ನುವ ನೆಲೆಯಲ್ಲಿ ಸೇವಾ ಸಮಿತಿ ಟ್ರಸ್ಟ್ ಮೂಲಕ ಕಾರ್ಯ ನಿರ್ವಹಿಸುತ್ತಿದೆ – ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್‌ನ ಕಾರ್ಯದರ್ಶಿಯಾದ ಶ್ರೀಶ ಭಟ್.