ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಆಶೀರ್ವಾದದೊಂದಿಗೆ ದಾನಿಗಳು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಕ್ಷೇತ್ರದ 100 ಅಶಕ್ತರಿಗೆ ‘ದೇವಿ ನೆಲೆ-ನಮ್ಮ ಮನೆ’ ಎಂಬ ಹೆಸರಿನಲ್ಲಿ ಸೂರು ನಿರ್ಮಿಸುವ ಯೋಜನೆಗೆ ಡಿ.1ರಂದು ಚಾಲನೆ ದೊರೆಯಿತು.
ಕೊಡ್ಲಾಡಿ ಗ್ರಾಮದ ಮಾರ್ಡಿ ಶಾಲಾ ಮೈದಾನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿ, ಹಿಂದುಗಳು ಒಂದಾಗುವ ಜತೆಗೆ ಅಶಕ್ತ ಎಲ್ಲ ರೀತಿಯಲ್ಲೂ ನೆರವಾಗಲು ಇಡೀ ಸಮಾಜವೇ ಮುಂದೆ ಬರಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಮುಂದಾಳತ್ವದಲ್ಲಿ ಕಾರ್ಯಕರ್ತರು, ದಾನಿಗಳು, ಹಿತೈಷಿಗಳು ಅರ್ಥಪೂರ್ಣ ಸಂಕಲ್ಪ ಮಾಡಿದ್ದಾರೆ. ರಾಮ ರಾಜ್ಯದ ಪರಿಕಲ್ಪನೆಯ ಭಾಗವಾಗಿ ಪ್ರತಿಯೊಬ್ಬರು ಸ್ವಂತ ಮನೆ ಹೊಂದಬೇಕು. ಈ ನಿಟ್ಟಿನಲ್ಲಿ ದೇವಿ ನೆಲೆ-ನಮ್ಮ ಮನೆ ಸಂಕಲ್ಪ ಶೀಘ್ರ ಸಾಕಾರಿಯಾಗಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯವಾಹರಾದ ಪಿ. ಎಸ್. ಪ್ರಕಾಶ್ ಅವರು ಮಾತನಾಡಿ, ಸಂಘ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಪ್ರಮುಖ ಯೋಜನೆ, ಸಂಘದ ಕಾರ್ಯ ವಿಸ್ತಾರದ ಬಗ್ಗ ಬೆಳಕು ಚೆಲ್ಲಿದರು.
ಶಾಸಕರಾದ ಗುರುರಾಜ್ ಗಂಟೆಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಹಲವು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನ ಮಾಡುತ್ತಿದ್ದೇವೆ. ದೇವಿ ನೆಲೆ-ನಮ್ಮ ಮನೆ ಯೋಜನೆಯೂ ಅರ್ಥಪೂರ್ಣವಾಗಿದ್ದು, ಪ್ರಸ್ತುತ ಇದರ ಅವಶ್ಯಕತೆಯೂ ಹೆಚ್ಚಿದೆ. ಅಶಕ್ತರಿಗೆ ಮನೆ ನಿರ್ಮಾಣ ಆಗಲೇ ಬೇಕು. ಇದಕ್ಕೆ ಇಡೀ ಸಮಾದ ಸಹಕಾರ ಅಗತ್ಯ ಎಂದರು.
ಹಿರಿಯರಾದ ರಾಜಾರಾಮ ಭಟ್ ಸೊರಬ, ಕೆ.ಪಿ ಶೆಟ್ಟಿ, ಕೃಷ್ಣಪ್ರಸಾದ ಅಡ್ಯಂತಾಯ, ಬಾಲಚಂದ್ರ ಭಟ್, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಶುಭಾಶ್ ಶೆಟ್ಟಿ ಕೊಡ್ಲಾಡಿ, ಗಣೇಶ್ ಪೂಜಾರಿ ಹಟ್ಟಿಯಂಗಡಿ, ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕೊಡ್ಲಾಡಿ, ರೋಹಿತ್ ಶೆಟ್ಟಿ ಉಳ್ಳೂರು, ಶೇಖರ ಖಾರ್ವಿ ಕಿರಿಮಂಜೇಶ್ವರ ಇನ್ನಿತರ ಪರಿವಾರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು