ಕುಂದಾಪುರ: ಜನರ ಜೀವ ಉಳಿಸಲು ರಕ್ತದ ತುಂಬಾ ಅವಶ್ಯಕತೆ ಇದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಸರಿಯಾದ ಸಮಯದಲ್ಲಿ ರಕ್ತ ದೊರೆಯದಿದ್ದಲ್ಲಿ ಪ್ರಾಣಕ್ಕೆ ಅಪಾಯ. ಹೀಗಾಗಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆಯಾದಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜನರ ಪ್ರಾಣ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಾರ್ಯಾಲಯದ ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ ಹೇಳಿದರು.
ಅವರು ಕೆನರಾ ಬ್ಯಾಂಕ್ ನೇರಳಕಟ್ಟೆ ಮತ್ತು ರಕ್ತನಿಧಿ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಿಸರ್ಗ ಫ್ರೆಂಡ್ಸ್ ಕ್ಲಬ್ ನೇರಳಕಟ್ಟೆ ಸಹಯೋಗದೊಂದಿಗೆ ನೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿನ ಎಜಿಎಂ ಐ.ಸಿ.ಶೆಟ್ಟಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಚೇರ್‌ಮೆನ್ ಎಸ್. ಜಯಕರ ಶೆಟ್ಟಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಶಾಖೆಯ ಸಂಚಾಲಕ ಮುತ್ತಯ್ಯ ಶೆಟ್ಟಿ, ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ, ಡಾ.ಎಚ್.ಎಸ್.ಮಲ್ಲಿ, ಉದ್ಯಮಿಗಳಾದ ಅಶೋಕಕುಮಾರ್ ಶೆಟ್ಟಿ, ನಾರಾಯಣ ನಾಯಕ್, ಸೀತಾರಾಮ ಶೆಟ್ಟಿ, ಶಿವರಾಮ ಶೆಟ್ಟಿ, ನಿಸರ್ಗ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಆಚಾರ್ಯ, ನಾರಾಯಣ ಗಾಣಿಗ, ಎಂ.ವಿ.ಲಮಾಣಿ ಮೊದಲಾದವರು ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಆಫೀಸರ್ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಫಜಲ್ ವಂದಿಸಿದರು.