ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆರ್ಥಿಕವಾಗಿ ಹಿಂದುಳಿದಿರುವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಬೈಂದೂರು ತಾಲೂಕಿನಲ್ಲಿ ಇದುವರೆಗೆ ಸುಮಾರು 140.74 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.

ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ ಗೃಹಲಕ್ಷ್ಮೀ ಯೋಜನೆಯಿಂದ 27,526 ಫಲಾನುಭವಿಗಳ ಸೆಪ್ಟೆಂಬರ್ ತಿಂಗಳ ತನಕ ಖಾತೆಗೆ ಪ್ರತಿತಿಂಗಂತೆ ಒಟ್ಟು ರೂ. 74.70 ಕೋಟಿ ಜಮಾ ಆಗಿದೆ. ತಾಂತ್ರಿಕ ಕಾರಣದಿಂದಾಗಿ 804 ಫಲಾನುಭವಿಗಳಿಗೆ ಬಾಕಿಯಿದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,748 ಕುಟುಂಬಗಳಿಗೆ ನವೆಂಬರ್ ತಿಂಗಳ ತನಕ 26 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1899 ಕುಟುಂಬಗಳಿಗೆ 1.71 ಕೋಟಿ ರೂ. ಸೇರಿದಂತೆ ಒಟ್ಟು 27.71ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182ಪಡಿತರ ಚೀಟಿಗಳಿಗೆ 1.90 ಕೋಟಿ ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವನಿಧಿ ಯೋಜನೆಯಡಿ 339 ಫಲಾನುಭವಿಗಳಿಗೆ 37.53 ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1 ಕೋಟಿಗೂ ಅಧಿಕ ಮಹಿಳೆಯರು (ಪುನರಾವರ್ತಿತ) ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, 36.04 ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.

ಗೃಹಲಲಕ್ಷ್ಮೀ ಯೋಜನೆಯಡಿ 804 ಮಂದಿಗೆ ತಾಂತ್ರಿಕ ಕಾರಣದಿಂದ ಹಣ ಬರುವುದು ತಡೆಯಾಗಿದೆ. ಇದಕ್ಕೆ ತಕ್ಷಣ ಸ್ಪಂದಿಸುವ ಕಾರ್ಯವಾಗಬೇಕು ಎಂಬ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹೇಳಿದರು. ಇದಕ್ಕೆ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಅಧಿಕಾರಿ ಉತ್ತರಿಸಿ ಸಾಲ ಮೊದಲಾದ ಕಾರಣಕ್ಕೆ ಐಟಿಆರ್ ಮಾಡಿದವರ ಬಿ.ಪಿ.ಎಲ್ ಕಾರ್ಡ್ ರದ್ದಾಗಿದೆ. ಅಂತವರಿಂದ ಐ.ಟಿ.ಆರ್ ಹಾಗೂ ಜಿ.ಎಸ್.ಟಿ ಪಾವತಿದಾರರು ಅಲ್ಲ ಎಂಬ ಬಗ್ಗೆ ಸಿಎ ಅವರ ಶಿಪಾರಸ್ಸು ಪತ್ರ ಪಡೆದು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ಸದ್ಯದಲ್ಲಿಯೇ ಅದು ಸರಿಯಾಗಲಿದೆ ಎಂದರು.
ಕೊಲ್ಲೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಮತ್ತೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಸ್‌ಆರ್‌ಟಿಸಿ ಅಧಿಕಾರಿ, ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ಬಗ್ಗೆ ಖಾಸಗಿ ಬಸ್ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದರಿಂದ ಸ್ಥಗಿತಗೊಳಿಸಲಾಗಿದೆ, ಇದು ತೆರವುಗೊಂಡ ಬಳಿಕ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು, ಅಲ್ಲದೇ ಬೈಂದೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಯನ್ನು ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಗ್ಯಾರೆಂಟಿ ಯೋಜನೆಯಿಂದ ಸಾರ್ವಜನಿಕರಿಗೆ ಉಪಯೋಗ:
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ಆದರೆ ಇದು ಶುದ್ಧ ಸುಳ್ಳು. ರಾಜ್ಯದ ಸುಮಾರು 3.75 ಲಕ್ಷ ರೂ. ಗಾತ್ರದ ಬಜೆಟ್‌ನಲ್ಲಿ ಕೇವಲ 56 ಸಾವಿರ ಕೋಟಿ ರೂ. ಮಾತ್ರ ಗ್ಯಾರಂಟಿಗೆ ವೆಚ್ಚವಾಗುತ್ತಿದ್ದು, ಉಳಿದ ಅನುದಾನದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ, ಕೇಂದ್ರ ಸರ್ಕಾರವು ರಾಜ್ಯದ ತೆರಿಗೆಯ ಪಾಲನ್ನು ಸಮರ್ಪಕವಾಗಿ ನೀಡಿದರೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಡಾ. ರವಿಕುಮಾರ್ ಹುಕ್ಕೇರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರಭಾಕರ ನಾಯ್ಕ, ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್ ಉಪಸ್ಥಿತರಿದ್ದರು.















